- ಜಿಲ್ಲಾ ಮಂತ್ರಿ ಬಗ್ಗೆ ಏಕವಚನ: ಕಾಂಗ್ರೆಸ್ ಮುಖಂಡರ ಆಕ್ರೋಶ - - -
ಹರಿಹರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಗಮನಹರಿಸುವ ಬದಲು, ತಮ್ಮ ಕಾರ್ಯ ವ್ಯಾಪ್ತಿಯನ್ನೂ ಮರೆತು ಶಾಸಕ ಬಿ.ಪಿ.ಹರೀಶ ವರ್ತಿಸುತ್ತಿದ್ದಾರೆ ಎಂದು ಹರಿಹರ ತಾಲೂಕು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಜಿ.ವಿ.ವೀರೇಶ ಅವರು, ಹರಿಹರ ಶಾಸಕರು ತಮ್ಮ ಸಣ್ಣಬುದ್ಧಿ ಕೈಬಿಟ್ಟು, ಕ್ಷೇತ್ರದ ಅಭಿವೃದ್ಧಿ, ಜನರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.ಶಾಸಕ ಬಿ.ಪಿ.ಹರೀಶ ಕೆಳ ವರ್ಗದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಕಾಮಗಾರಿಗಳ ವಿಚಾರದಲ್ಲಿ ವಿನಾಕಾರಣ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ. ರಾಜಕೀಯದಲ್ಲಿ ಟೀಕೆಗಳು ಅನಿವಾರ್ಯ. ಆದರೆ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದು ಸರಿಯಲ್ಲ. ಶಾಸಕರಾದವರ ವರ್ತನೆ ಇತರರಿಗೂ ಮಾದರಿ ಆಗಿರಬೇಕು ಎಂದು ಹೇಳಿದರು.
ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದೆ. ಅನೇಕ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿವೆ. ಶಾಸಕರು ಮೊದಲು ಅವುಗಳನ್ನು ಬಗೆಹರಿಸುವ ಕೆಲಸ ಮಾಡಬೇಕು. ಜನರ ಸಮಸ್ಯೆಗೆ ಮೊದಲು ಸ್ಪಂದಿಸಲಿ. ಅದನ್ನು ಬಿಟ್ಟು ತಮಗೆ ಬೇಡವಾದ ಕೆಲಸಗಳ ಬಗ್ಗೆಯೇ ಹರಿಹರ ಶಾಸಕರು ಗಮನ ಹರಿಸುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನ ರೋಸಿ ಹೋಗಿದ್ದಾರೆ ಎಂದು ಟೀಕಿಸಿದರು.ಭ್ರಮೆಯಿಂದ ಹೊರಬನ್ನಿ:
ಮುಖಂಡ ಹನುಮಂತಪ್ಪ ಪೈಲ್ವಾನ್ ಮಾತನಾಡಿ, ತಮಗೆ ರಾಜಕೀಯ ಬದುಕು ನೀಡಿದ ಮಾಜಿ ಸಿಎಂ ಯಡಿಯೂರಪ್ಪನವರ ಬಗ್ಗೆಯೇ ಮನಬಂದಂತೆ ಮಾತನಾಡುವ ವ್ಯಕ್ತಿ ಬಳಿ ಬುದ್ಧಿ ಹೇಳಿಸಿಕೊಳ್ಳುವ ದಾರಿದ್ರ್ಯ ಕಾಂಗ್ರೆಸಿಗರಿಗೆ ಬಂದಿಲ್ಲ. ಪರಿಶಿಷ್ಟ ಸಮುದಾಯದ ಕಾಯಕದ ಬಗ್ಗೆ ಶಾಸಕ ಬಿ.ಪಿ.ಹರೀಶ ಹಗುರವಾಗಿ ಮಾತನಾಡಿದ್ದು ಅಕ್ಷಮ್ಯ. ದೊಡ್ಡ ದೊಡ್ಡವರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿ, ದೊಡ್ಡವನಾಗುತ್ತೇನೆಂಬ ಭ್ರಮೆಯಿಂದ ಶಾಸಕರು ಹೊರಬರಲಿ ಎಂದರು.ತಮಗೆ 3-4 ದಶಕಗಳ ರಾಜಕೀಯ ಅನುಭವವಿದೆ ಎನ್ನುವ ಬಿ.ಪಿ.ಹರೀಶ ಹರಿಹರ ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗಿಲ್ಲ. ಗ್ರಾಮೀಣ ಭಾಗಕ್ಕೆ ಪೂರಕವಾದ ಭೈರನಪಾದ ಯೋಜನೆ ಅನುಷ್ಠಾನದಲ್ಲೂ ವಿಫಲವಾಗಿದ್ದಾರೆ. ತಾಲೂಕಿನ ಮುಖ್ಯ ರಸ್ತೆಗಳನ್ನು ನಿರ್ಮಿಸುವುದಿರಲಿ ಗುಂಡಿ ಮುಚ್ಚಿಸುವ ಕೆಲಸ ಸಹ ಮಾಡುತ್ತಿಲ್ಲ. ತೋರಿಕೆಗೆ ಫುಟ್‌ಪಾತ್ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.
ಮುಖಂಡರಾದ ಹನುಮಂತಪ್ಪ, ರಜನಿಕಾಂತ, ಸಂತೋಷ, ಆರ್.ವಿಜಯಕುಮಾರ, ಯುವರಾಜ, ಹಬೀಬ್ ಬೇಗ್, ಎಂ.ಸಂತೋಷ ನೋಟದವರ, ಹನುಮಂತಪ್ಪ ಮಾಕನೂರು, ಬಸವರಾಜಪ್ಪ ಇತರರು ಇದ್ದರು.- - - -27ಕೆಡಿವಿಜಿ7:
ದಾವಣಗೆರೆಯಲ್ಲಿ ಮಂಗಳವಾರ ಹರಿಹರ ತಾಲೂಕು ಕಾಂಗ್ರೆಸ್ ಮುಖಂಡರಾದ ಜಿ.ವಿ.ವೀರೇಶ, ಹನುಮಂತಪ್ಪ ಪೈಲ್ವಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.