ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಿಳೆಯರಲ್ಲಿರುವ ಪ್ರತಿಭೆ ಹೊರಹಾಕಲು ಸಮಾಜದ ಸಂಘಟನೆಗಳು ಮುಂದಾಗಬೇಕೆಂದು ನಗರಸಭೆ ಉಪಾಧ್ಯಕ್ಷೆ ಶೋಭಾ ರಾವ್ ಕರೆ ನೀಡಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಂಗಸಂಸ್ಥೆಯಾದ ಬಾಗಲಕೋಟೆ ಜಿಲ್ಲಾ ಬ್ರಾಹ್ಮಣ ಮಹಾಸಭೆ ಮಹಿಳಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಕನಕದಾಸರ ಜಯಂತಿ ನಿಮಿತ್ತ ಮಹಿಳೆಯರಿಗೆ ಬೇಯಿಸದೆ ಅಡುಗೆ ಮಾಡುವ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ಪ್ರತಿಭೆಗಳಿವೆ, ಅವುಗಳನ್ನು ಸಮಾಜದ ಮುಂದೆ ಸಾದರಪಡಿಸಲು ವೇದಿಕೆ ಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭೆಯ ಮಹಿಳಾ ಘಟಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸಮಾಜದ ಸಂಘಟನೆಯಲ್ಲಿ ಮಹಿಳೆಯರು ಸಹ ಭಾಗವಹಿಸಿ ಸಮಾಜದ ಆಗು-ಹೋಗುಗಳ ಬಗ್ಗೆ ಕೂಲಂಕುಷವಾಗಿ ವಿಚಾರ ಮಾಡಬೇಕು. ಎಲ್ಲದರಲ್ಲೂ ಮಹಿಳೆಯರು ಮುಂದೆ ಬರಬೇಕು. ಸಮಾಜದ ಅಭಿವೃದ್ಧಿಗೆ ಸಂಘಟನೆ ಅವಶ್ಯವಾಗಿ ಬೇಕು. ಸಂಘಟನಾಕಾರರ ಜೊತೆ ಮಹಿಳೆಯರು ಸಹ ನಿಲ್ಲಬೇಕು ಎಂದು ಕೇಳಿದರು.ಜಿಲ್ಲಾ ಬ್ರಾಹ್ಮಣ ಮಹಾಸಭೆಯ ಖಜಾಂಚಿ ಅನಂತ ಉಮರ್ಜಿ ಮಾತನಾಡಿ, ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಅವಶ್ಯವಾಗಿದೆ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡುವಲ್ಲಿ ಮಹಿಳೆಯರು ಸದಾ ಸಂಘಟಿತರಾಗಿ ಇರಬೇಕು. ಸಂಘಟನೆಗಳು ಮಾಡುವ ಕಾರ್ಯಗಳ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸ್ನೇಹಾ ಜೋರಾಪೂರ, ದಾಸಶ್ರೇಷ್ಠರಾದ ಕನಕದಾಸರ ಬಗ್ಗೆ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಹರಿಮಂದಿರ ಮಾತನಾಡಿದರು. ಬಾಗಲಕೋಟೆ ಕೋ-ಆಪ್ ಬ್ಯಾಂಕ್ ನ ಅಧ್ಯಕ್ಷ, ಪಕ್ವಾನ ಗ್ರುಪ್ ಮಾಲೀಕ ಪವನ ಸಿಮಿಕೇರಿ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭೆ ಪ್ರಧಾನ ಕಾರ್ಯದರ್ಶಿ ಅನಂತ ಮಳಗಿ ನಿರ್ಣಾಯಕರಾಗಿ ಮತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಾಗಲಕೋಟೆ ಜಿಲ್ಲಾ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಭಾಸ್ಕರ ಮಗೂಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಂತ ಮಳಗಿಯವರು ನಿರ್ಣಾಯಕರಾಗಿ ಆಗಮಿಸಿದ್ದರು.
ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಸಂಗೀತಾ ಕಲಾಲಬಂಡಿ, ಸದಸ್ಯರಾದ ಸುಮನ ದೇಶಪಾಂಡೆ, ಆರತಿ ಬರಗಿ ಮತ್ತಿರರು ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಶ್ವೇತಾ ಮುತಾಲಿಕ ಹಾಗೂ ಶ್ರೀರಕ್ಷಾ ನಾಗಸಂಪಿಗೆ ಭಕ್ತಿ ಗೀತೆಯ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ. ಅಶ್ವಿನಿ ಮಾರ್ಕೋಡ ಸ್ವಾಗತಿಸಿದರು. ಚಂದ್ರಿಕಾ ಜೋಶಿ ನಿರೂಪಿಸಿದರು. ಸುಮಾ ಮಳಗಿ ವಂದಿಸಿದರು.ಸ್ಪರ್ಧೆ ವಿಜೇತರು:
ಸ್ಪರ್ಧೆಯಲ್ಲಿ 7 ಮಹಿಳಾ ಮಂಡಳಿಗಳು ಭಾಗವಹಿಸಿದ್ದರು. ವಿಜಯ ವಿಠ್ಠಲ ಭಜನಾ ಮಂಡಳಿ ಪ್ರಥಮ ಸ್ಥಾನ, ಪ್ರಸನ್ನ ವೆಂಕಟ ಭಜನಾ ಮಂಡಳಿ ದ್ವೀತಿಯ, ರುಕ್ಮಿಣಿ ಭಜನಾ ಮಂಡಳಿ ಹಾಗೂ ಹರೇ ಶ್ರೀನಿವಾಸ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದರು. ಚೇತನಾ ಭಜನಾ ಮಂಡಳಿ, ದಾಸನಿಧಿ ಭಜನಾ ಮಂಡಳಿ, ಸಮನಾ ಭಜನಾ ಮಂಡಳಿ ಸಮಾಧಾನಕರ ಬಹುಮಾನ ಪಡೆದವು.