ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಮಹನೀಯರ ಜಯಂತಿ ಆಚರಿಸಬೇಕು
ಕೊಪ್ಪಳ: ಡಾ. ಬಾಬು ಜಗಜೀವನ ರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ, ಅವರ ಸಾರ್ಥಕ ಜೀವನದ ಬಗ್ಗೆ ಜನರಿಗೆ ತಿಳಿಯುವಂತೆ ಎಲ್‌ಇಡಿ ಸ್ಕ್ರೀನ್‍ಗಳ ಮೂಲಕ ಜೀವನ ಚರಿತ್ರೆ ಪರಿಚಯಿಸಿ, ಅರ್ಥಪೂರ್ಣವಾಗಿ ಜಯಂತಿ ಆಚರಣೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏ. 5ರಂದು ಡಾ. ಬಾಬು ಜಗಜೀವನ್ ರಾಂ ಅವರ 119ನೇ ಜನ್ಮ ದಿನಾಚರಣೆ ಹಾಗೂ ಏ. 14ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಚರ್ಚಿಸಲು ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿಗದಿತ ದಿನಾಂಕಗಳಂದು ಬೆಳಗ್ಗೆ 8.30 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮಹನೀಯರ ಭಾವಚಿತ್ರದ ಮೆರವಣಿಗೆ ಆರಂಭವಾಗಿ, ಗಡಿಯಾರ ಕಂಬ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದ ವರೆಗೆ ನಡೆಯಲಿದೆ. ಸಾಹಿತ್ಯ ಭವನದಲ್ಲಿ ಬೆಳಗ್ಗೆ 10.30ಕ್ಕೆ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಸಮುದಾಯದ ಸಾಧಕರನ್ನು ಸನ್ಮಾನಿಸಬೇಕು. ವಿಶೇಷ ಉಪನ್ಯಾಸ ಆಯೋಜಿಸಬೇಕು. ಮಹನೀಯರಿಗೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸಬೇಕು ಎಂದು ಹೇಳಿದರು.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಮಹನೀಯರ ಜಯಂತಿ ಆಚರಿಸಬೇಕು. ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಬೇಕು. ಗೊಂದಲ, ಅಡಚಣೆ ಉಂಟಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಟಿ., ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಾಗವೇಣಿ, ನಗರಸಭೆ ಪೌರಾಯುಕ್ತ ವೆಂಕಟೇಶ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಪುಷ್ಪಲತಾ, ಸಮಾಜದ ಮುಖಂಡರಾದ ವೆಂಕಟೇಶ ಹಾಲವರ್ತಿ, ಪಾಳೆಪ್ಪ ಎಚ್. ಪೂಜಾರ, ಸಿದ್ದರಾಮ ಹೊಸಮನಿ, ಶಾಂತಕುಮಾರ, ರಾಘು ಡಿ. ಚಾಕರಿ, ಚಂದ್ರುಸ್ವಾಮಿ ಹೊಸಮನಿ, ದ್ಯಾಮಣ್ಣ ಪೂಜಾರ, ರಾಮಣ್ಣ ಚೌಡ್ಕಿ ಉಪಸ್ಥಿತರಿದ್ದರು.
ಪೂರ್ವಭಾವಿ ಸಭೆ ಮಾ. 30ಕ್ಕೆ ಮುಂದೂಡಿಕೆ
ಕುಕನೂರು ತಾಲೂಕು ಆಡಳಿತದ ವತಿಯಿಂದ ತಾಲೂಕು ಕೇಂದ್ರದಲ್ಲಿ ಏ. 5ರಂದು ಡಾ. ಬಾಬು ಜಗಜೀವನ್ ರಾಂ ಅವರ 119ನೇ ಜನ್ಮ ದಿನಾಚರಣೆ ಮತ್ತು ಏ. 14ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ನಡೆಯಲಿದ್ದು, ಈ ಕುರಿತು ಚರ್ಚಿಸಲು ಮಾ. 25ರಂದು ನಿಗದಿಪಡಿಸಲಾಗಿದ್ದ ಪೂರ್ವಭಾವಿ ಸಭೆಯನ್ನು ಕಾರಣಾಂತರಗಳಿಂದ ಮಾ. 30ಕ್ಕೆ ಮುಂದೂಡಲಾಗಿದೆ. ಮಾ. 30ರಂದು ಮಧ್ಯಾಹ್ನ 3.30ಕ್ಕೆ ಕುಕನೂರಿನ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.