ಉಡುಪಿ: ಕ್ಷಯರೋಗವು ಸಾರ್ವಜನಿಕ ಆರೋಗ್ಯಕ್ಕೆ ಸವಾಲೊಡ್ಡುತ್ತಿದ್ದು, ನಮ್ಮ ದೇಶದಲ್ಲಿ ಕ್ಷಯರೋಗ ಮರಣ ತರುವ ಗಂಭೀರ ಕಾಯಿಲೆಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಆದ್ದರಿಂದ ಕ್ಷಯ ರೋಗದ ಶಾಶ್ವತ ನಿರ್ಮೂಲನೆಗೆ ಎಲ್ಲ ಇಲಾಖೆಗಳು, ಸಮನ್ವಯದಿಂದ ಕಾರ್ಯನಿರ್ವಹಿಸಿ ಉಡುಪಿ ಜಿಲ್ಲೆಯನ್ನು ಕ್ಷಯ ಮುಕ್ತಗೊಳಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಹೇಳಿದರು.
ಜಿಲ್ಲಾ ಆಕುಕ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಮಾತನಾಡಿ, ಕ್ಷಯ ಮುಕ್ತ ಅಭಿಯಾನದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆಮನೆ ಭೇಟಿ ನೀಡಲಿದ್ದು, ಅವರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿವರ್ಷ 40,000 - 45,000 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು ಸುಮಾರು 1,500 ಮಂದಿಯಲ್ಲಿ ಕ್ಷಯರೋಗ ಪ್ರಕರಣಗಳನ್ನು ಪತ್ತೆಹಚ್ಚಲಾಗುತ್ತಿದೆ. ಅವರಲ್ಲಿ 500 - 600 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಕ್ಷಯರೋಗದಲ್ಲಿ ಮರಣಾಂತಿಕವಾಗಿರುವುದರಿಂದ, ಅದನ್ನು ಮುಂಚಿತವಾಗಿಯೇ ಪತ್ತೆಹಚ್ಚಲು ಆಂಡ್ರಾಯ್ಡ್ ಎಕ್ಸರೇ ಯಂತ್ರವನ್ನು ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಕ್ಷಯಮುಕ್ತ ಎಂದು ಗುರುತಿಸಲಾದ 64 ಗ್ರಾಪಂಗಳಲ್ಲಿ 18 ಗ್ರಾಪಂಗಳಿಗೆ ಕಂಚಿನ ಪದಕ, 26 ಗ್ರಾಪಂಗಳಿಗೆ ಬೆಳ್ಳಿ ಪದಕ ಹಾಗೂ 20 ಗ್ರಾಪಂಗಳಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಲತಾ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ. ಕೆ., ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಆಲಂದೂರು ಮಂಜುನಾಥ ಎಸ್ ಗಾಣಿಗ ನಿರೂಪಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಜೈನ್ ವಂದಿಸಿದರು.