ಹೊಸಪೇಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲೆಯ ಎಲ್ಲ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಎಲ್ಲ ನಾಮ ನಿರ್ದೇಶನಗೊಂಡಿರುವ ನಿಗಮ ಮಂಡಳಿಗಳನ್ನು ಹಾಗೂ ಸಮಿತಿಗಳನ್ನು ಸಂಪೂರ್ಣ ಚುನಾವಣೆ ಪ್ರಕ್ರಿಯೆ ಮುಕ್ತಾಯದ ವರೆಗೆ ಅಮಾನತಿನಲ್ಲಿಡಲಾಗಿದೆ. ರಾಜಕೀಯ ಪಕ್ಷಗಳು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದರು.
ಸಭೆ, ಸಮಾರಂಭಗಳಿಗೆ ಧ್ವನಿವರ್ಧಕಗಳು ಅಥವಾ ಇತರೆ ಯಾವುದೇ ಸೌಲಭ್ಯವನ್ನು ಬಳಸಲು ಅನುಮತಿ ಅಥವಾ ಪರವಾನಗಿ ಪಡೆಯಬೇಕಾದರೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ಮತ್ತು ಅಂತಹ ಅನುಮತಿ ಮತ್ತು ಪರವಾನಗಿ ಪಡೆಯಬೇಕು. ಮೆರವಣಿಗೆಗೂ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಒಮ್ಮೆ ಅನುಮತಿ ಪಡೆದ ಮೇಲೆ ಯಾವುದೇ ಕಾರಣಕ್ಕೂ ಮಾರ್ಗವನ್ನಾಗಲಿ ಅಥವಾ ಕಾರ್ಯಕ್ರಮವನ್ನಾಗಲಿ ಬದಲಾಯಿಸುವಂತಿಲ್ಲ. ಸ್ಥಳೀಯ ಪೊಲೀಸ್ ಮತ್ತು ಚುನಾವಣಾ ಸಿಬ್ಬಂದಿ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.ಮತದಾನದ ದಿನ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಹಕಾರ ನೀಡಬೇಕು. ಪಕ್ಷಗಳ ಕಾರ್ಯಕರ್ತರಿಂದ ಯಾವುದೇ ಅಡಚಣೆಗಳು ಉಂಟಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಮತಗಟ್ಟೆ ಪ್ರವೇಶಕ್ಕೆ ಅನುಮತಿ ಹೊಂದಿದ ಏಜೆಂಟರಿಗೆ ಮಾತ್ರ ಅವಕಾಶವಿರುತ್ತದೆ. ನಿರ್ಬಂಧಿಸಿದ ಪ್ರದೇಶದೊಳಗೆ ಯಾವುದೇ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂದೂ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಡಿ. ಶಿವಶಂಕರ, ಕೆ. ಅನಂತ ಪ್ರದ್ಮನಾಭ, ಚಂದ್ರಕಾಂತ್ ಕಪ್ಲಿ, ನಿಂಬಗಲ್ ರಾಮಕೃಷ್ಣ, ವಿ.ನಾಗರಾಜ, ಎಂ.ಡಿ.ಜಾವೀದ್ ಮತ್ತಿತರರಿದ್ದರು.