ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳ ಪ್ರಯತ್ನದ ಜೊತೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷರಾದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಕರೆ ನೀಡಿದರು.ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ತಪೋಭೂಮಿ ಆಗಿದ್ದು, ಇಲ್ಲಿ ಜನಿಸಿರುವುದು ಎಲ್ಲರ ಪುಣ್ಯ. ಕನ್ನಡ ನಮ್ಮ ಮಾತೃ ಭಾಷೆಯಾದರೂ, ಮನೆಗಳಲ್ಲಿ ಬಿಟ್ಟರೆ ಸರ್ಕಾರದ ಹಂತದಲ್ಲಿ ಬಳಕೆ ಮಾಡದಿದ್ದರೆ ಕನ್ನಡವನ್ನು ಮರೆತು ಆಂಗ್ಲ ಭಾಷೆಯ ಬಳಕೆಗೆ ನಾವು ಮುಂದಾಗುತ್ತಿದ್ದೇವು ಎಂದು ವಿಷಾದಿಸಿದರು.
ಕನ್ನಡ ಭಾಷೆಯ ಮೇಲೆ ಅಭಿಮಾನ ಇದ್ದರೂ, ಕನ್ನಡವನ್ನು ಮರೆಯುತ್ತಿದ್ದೇವೆ. ದಿನನಿತ್ಯದ ಕೆಲಸಗಳಲ್ಲಿ ಕನ್ನಡ ಬಳಕೆಗೆ ಹಿಂದೇಟು ಹಾಕುತ್ತಿದ್ದೇವೆ. ಹೊರಗಿನ ಪ್ರಪಂಚದ ಜ್ಞಾನವನ್ನು ಬೆಳೆಸಿಕೊಳ್ಳಲು ನಾವು ಬೇರೆ ಭಾಷೆಗಳನ್ನು ಕಲಿಯಬೇಕು. ಆದರೆ, ನಮ್ಮ ಮಾತೃ ಭಾಷೆ ಮರೆಯಬಾರದು. ಮಾತೃಭಾಷೆ ಮರೆತರೆ ನಮಗೆ ಜನ್ಮ ನೀಡಿದ ತಾಯಿಯನ್ನು ಮರೆತಂತೆ ಎಂದರು.ಉತ್ತಮ ಕೆಲಸ ಮಾಡೋಣ:
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಮಾತನಾಡಿ, ನಿತ್ಯದ ಕಚೇರಿಗಳಲ್ಲಿ ನಮಗೆ ತೊಂದರೆಗಳ ಜತೆಗೆ ಅನುಕೂಲಗಳು ಇದೆ. ಆದರೆ, ನಾವೆಲ್ಲವೂ ತಂಡವಾಗಿ ಕೆಲಸ ಮಾಡಿದರೆ ಪರಿಣಾಮಕಾರಿ ಆಗಲಿದೆ. ಇದರಿಂದ ನಿಗಮಕ್ಕೆ ಹಾಗೂ ನಿಮಗೂ ಭದ್ರತೆ ದೊರೆಯಲಿದೆ. ದೈನಂದಿನ ಕೆಲಸಗಳನ್ನು ಸ್ವಇಚ್ಛೆಯಿಂದ ಉತ್ತಮವಾಗಿ ಮಾಡಿದರೆ ನಮ್ಮ ಸಂಸ್ಥೆ ಆರ್ಥಿಕವಾಗಿಯೂ ಸದೃಢವಾಗಲಿದೆ. ಹೀಗಾಗಿ, ಸಮಯ ಪಾಲನೆಯೊಂದಿಗೆ ಹೊಸತನವನ್ನು ಅಳವಡಿಸಿಕೊಂಡು ಕೆಲಸ ಮಾಡುವಲ್ಲಿ ಚಿಂತನೆ ನಡೆಸಬೇಕಿದೆ ಎಂದರು.ಉಳಿದ ಸಂಸ್ಥೆಗಳಿಗಿಂತೂ ನಮ್ಮ ನಿಗಮದ ಕೆಲಸ, ಯೋಜನೆಗಳು ಮಾದರಿ ಆಗಿದೆ. ಸಾಕಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, 32 ಸಿಎ ನಿವೇಶನಗಳನ್ನು ಪಡೆಯಲಾಗಿದ್ದು, ಸ್ವಂತ ಕಟ್ಟಡ ಕಟ್ಟುವ ಕೆಲಸಗಳು ನಡೆಯುತ್ತಿದೆ. ನಮ್ಮ ಕೆಲಸಗಳಿಗೆ ನಿಗಮದ ಅಧ್ಯಕ್ಷರು ಒತ್ತಾಸೆಯಾಗಿ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ನಾವೆಲ್ಲರೂ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಂಸ್ಥೆಯ ಪ್ರಗತಿಗೆ ಶ್ರಮಿಸೋಣ ಎಂದು ಅವರು ಹೇಳಿದರು.
ಸೆಸ್ಕ್ ಮುಖ್ಯ ಆರ್ಥಿಕಾಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶರಣಮ್ಮ ಎಸ್. ಜಂಗಿನ್, ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕರಾದ ಡಾ.ಬಿ.ಆರ್. ರೂಪಾ, ಎಲ್. ಲೋಕೇಶ್, ರಾಮಸ್ವಾಮಿ, ಜಾಗೃತ ದಳದ ಎಸ್ಪಿ ಸವಿತಾ ಹೂಗಾರ್ ಮೊದಲಾದವರು ಇದ್ದರು.