ಭಾರತ ದೇಶ ಸ್ವತಂತ್ರಗೊಂಡ ನಂತರ ದೇಶದ 552 ಸಂಸ್ಥಾನಗಳನ್ನು ಒಟ್ಟುಗೂಡಿಸಿದ ಕೀರ್ತಿ ದೇಶದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲರಿ ಅವರಿಗೆ ಸಲ್ಲುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ: ಭಾರತ ದೇಶ ಸ್ವತಂತ್ರಗೊಂಡ ನಂತರ ದೇಶದ 552 ಸಂಸ್ಥಾನಗಳನ್ನು ಒಟ್ಟುಗೂಡಿಸಿದ ಕೀರ್ತಿ ದೇಶದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲರಿ ಅವರಿಗೆ ಸಲ್ಲುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಶುಕ್ರವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ 150ನೇ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಏಕತಾ ನಡಿಗೆ ಜಾಥಾವನ್ನು ಗೋವು ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕಾಶ್ಮೀರದ ರಾಜಾ ಹರಿಸಿಂಗ್ ಅವರ ಮನವೊಲಿಸಿ ಕಾಶ್ಮೀರವನ್ನು ಭಾರತ ದೇಶದ ಸಂವಿಧಾನದ ಅಡಿಯಲ್ಲಿ ಸೇರ್ಪಡೆ ಮಾಡಲಾಯಿತು.ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ನಾಯಕರನ್ನು ಸ್ಮರಿಸಿಕೊಂಡು ನಾವೆಲ್ಲ ಅವರ ಮಾರ್ಗದಲ್ಲಿ ಸಾಗುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕು ಎಂದು ಕರೆನೀಡಿದರು.ಇಂದಿನ ಯುವ ಸಮೂಹವು ನಮ್ಮ ಸ್ವಾತಂತ್ರ್ಯ ಯೋಧರು ಮತ್ತು ಹೆಮ್ಮೆಯ ಸೈನಿಕರನ್ನು ಗೌರವಿಸಬೇಕು. ಈ ದೇಶದ ಮಣ್ಣಿನಲ್ಲಿ ಎಲ್ಲಾ ರೀತಿಯ ಶಕ್ತಿಯಿದೆ. ಅದನ್ನು ಸರಿಯಾದ ರೀತಿಯಲ್ಲಿ ನಾವೆಲ್ಲಾ ಬಳಸಿಕೊಳ್ಳಬೇಕು. ಒಂದಾಗಿ ಸದೃಢ ಭಾರತ ದೇಶವನ್ನು ನಿರ್ಮಾಣ ಮಾಡುವಂತಹ ಕೆಲಸ ಮಾಡಬೇಕಿದೆ ಎಂದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತಾನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆಯನ್ನು ನಿರ್ಮಾಣ ಮಾಡಿದರು. ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್ ಅವರಂತಹ ನಾಯಕರ ಜೀವನ ಚರಿತ್ರೆಯನ್ನು ಇಂದಿನ ಯುವಕರು ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು. ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತಾನಾಡಿ, ನಾವೆಲ್ಲಾ ಒಂದೇ ಎಂದು ಹೇಳಲು ಕಾರಣ ಪಟೇಲರು. 1928ರಲ್ಲಿ ಗುಜರಾತಿನಲ್ಲಿ ನಡೆದ ಬಾರ್ಡೋಲಿ ರೈತ ಚಳುವಳಿಯಲ್ಲಿನ ವಲ್ಲಭಬಾಯಿ ಪಟೇಲರ ನಾಯಕತ್ವವನ್ನು ಮೆಚ್ಚಿ ಬಾರ್ಡೋಲಿಯ ರೈತರು ಅವರಿಗೆ “ಸರ್ದಾರ್’ ಎಂಬ ಬಿರುದು ನೀಡಿದರು. ಭಾರತದ ಪ್ರಥಮ ಗೃಹ ಸಚಿವರಾಗಿ ದೇಶದ ಎಲ್ಲಾ ರಾಜ್ಯಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿದರು. ಇದರ ಫಲವಾಗಿ ‘ನಾವೆಲ್ಲಾ ಒಂದೇ’ ಎಂಬ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಏಕತಾ ನಡಿಗೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಾವೆಲ್ಲಾ ಒಂದೇ ಎಂಬ ಹಾಗೂ ನಶೆಮುಕ್ತ ಭಾರತ್ ಅಭಿಯಾನದ ಪ್ರತಿಜ್ಞಾವಿಧಿಗಳನ್ನು ಬೋಧಿಸಲಾಯಿತು.ಜಾಥಾ ನಗರದ ನೆಹರು ಸ್ಟೇಡಿಯಂನಿಂದ ಹೊರಟು ಮಹಾವೀರ ಸರ್ಕಲ್, ಜೈಲ್ ಸರ್ಕಲ್, ದುರ್ಗಿಗುಡಿ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಿತು. ‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆ ಮೂಲಕ ಯುವಜನರಲ್ಲಿ ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಏಕತಾ ಜಾಥಾದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಅಧಿಕಾರಿಗಳು, ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.