ಡಿಸಿಸಿ ಬ್ಯಾಂಕ್‌ಗೆ ಸಚಿನ್'' ನೂತನ ಸಾರಥಿ

KannadaprabhaNewsNetwork |  
Published : Nov 22, 2025, 01:45 AM IST
೨೧ಕೆಎಂಎನ್‌ಡಿ-೧ಮಂಡ್ಯದ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಚಿನ್ ಎನ್.ಚಲುವರಾಯಸ್ವಾಮಿ ಅವರನ್ನು ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ ಮತ್ತಿತರರು ಬಾದಾಮಿ ಹಾರ ಹಾಕಿ ಅಭಿನಂದಿಸಿದರು. | Kannada Prabha

ಸಾರಾಂಶ

ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಅತಿ ಕಿರಿಯ (33) ವಯಸ್ಸಿನ ಯುವಕರೊಬ್ಬರಿಗೆ ಅಧ್ಯಕ್ಷ ಸ್ಥಾನ ದೊರಕಿದೆ. ಆ ದಾಖಲೆಯನ್ನು ಸಚಿನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇಷ್ಟೊಂದು ಕಿರಿಯ ವಯಸ್ಸಿಗೆ ಇದುವರೆಗೆ ಯಾರೊಬ್ಬರಿಗೂ ಅಧ್ಯಕ್ಷ ಸ್ಥಾನ ದೊರಕಿರಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿರೀಕ್ಷೆಯಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಟಿ.ಚಲುವರಾಜು ಅವರು ಶುಕ್ರವಾರ ಅವಿರೋಧ ಆಯ್ಕೆಯಾದರು. ಇಬ್ಬರೂ ಅಧಿಕೃತವಾಗಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.

ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಚಿನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಚಲುವರಾಜು ಅವರನ್ನು ನೇಮಕ ಮಾಡುವುದಕ್ಕೆ ಶಾಸಕರು ಹಾಗೂ ಬ್ಯಾಂಕ್ ನಿರ್ದೇಶಕರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದರು.

ಶುಕ್ರವಾರ ನಿಗದಿಯಾಗಿದ್ದ ಚುನಾವಣೆ ವೇಳೆ ಕಾಂಗ್ರೆಸ್ ಗೆ ಪೂರ್ಣ ಬಹುಮತವಿದ್ದ ಕಾರಣ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆ ನಡೆಯದೆ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅವಿರೋಧವಾಗಿ ಘೋಷಿಸಲಾಯಿತು. ಚುನಾವಣಾಧಿಕಾರಿ ಎಂ.ಶಿವಸ್ವಾಮಿ ಅವರು ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಪ್ರಮಾಣಪತ್ರ ವಿತರಿಸಿದರು.

ಬ್ಯಾಂಕ್ ಎದುರು ಸಂಭ್ರಮಾಚರಣೆ:

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಅಧ್ಯಕ್ಷ- ಉಪಾಧ್ಯಕ್ಷರು ನೇಮಕಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದರು. ಬೆಳಗ್ಗೆ ೧೦ ಗಂಟೆ ಸಮಯಕ್ಕೆ ನಾಮಪತ್ರ ಸಲ್ಲಿಸಿ ತೆರಳಿದ್ದ ಸಚಿನ್ ಹಾಗೂ ಟಿ.ಚಲುವರಾಜು ಅವರು ಮಧ್ಯಾಹ್ನ ೧.೩೦ರ ಸಮಯಕ್ಕೆ ಕಾರಿನಲ್ಲಿ ಬ್ಯಾಂಕಿನ ಆವರಣಕ್ಕೆ ಬಂದಿಳಿದರು. ಅಭಿಮಾನಿಗಳು, ಕಾರ್ಯಕರ್ತರು ಇಬ್ಬರಿಗೂ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಹರ್ಷೋದ್ಘಾರ ಮೊಳಗಿಸಿದರು. ನಂತರ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಬ್ಯಾಂಕ್‌ನ ನಿರ್ದೇಶಕರು ಅಭಿನಂದಿಸಿದರು.

ಮಾಜಿ ಶಾಸಕ ಎಚ್‌.ಬಿ.ರಾಮು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಸಿ.ಎಂ.ದ್ಯಾವಪ್ಪ, ಚಂದಗಾಲು ವಿಜಯಕುಮಾರ್‌ ಇತರರು ಇದ್ದರು.

---

ರೈತರಿಗೆ ಬೆನ್ನೆಲುಬಾಗಿ ನಿಲ್ಲುವೆ: ಸಚಿನ್ ಚಲುವರಾಯಸ್ವಾಮಿ

ಕನ್ನಡಪ್ರಭ ವಾರ್ತೆ ಮಂಡ್ಯ

ಡಿಸಿಸಿ ಬ್ಯಾಂಕಿನ ಶ್ರೇಯೋಭಿವೃದ್ಧಿ ಹಾಗೂ ರೈತರಿಗೆ ಬೆನ್ನೆಲುಬಾಗಿ ನಿಲ್ಲುವುದು ನನ್ನ ಪರಮೋಚ್ಛ ಗುರಿಯಾಗಿದೆ. ಈ ಗುರಿ ಸಾಧನೆಗೆ ಬ್ಯಾಂಕಿನ ಹಿರಿಯರ ಅಧ್ಯಕ್ಷರು- ನಿರ್ದೇಶಕರೆಲ್ಲರ ಮಾರ್ಗದರ್ಶನ ಪಡೆದು ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿ ನೂತನ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ವಿಶ್ವಾಸದಿಂದ ನುಡಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬ್ಯಾಂಕಿನ ನಿರ್ದೇಶಕರೆಲ್ಲರೂ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಬಹಳ ಜವಾಬ್ದಾರಿಯುತವಾಗಿ ಅಧಿಕಾರ ನಡೆಸುತ್ತೇನೆ. ಯಾರ ವಿಶ್ವಾಸಕ್ಕೂ ಕಳಂಕ ಬಾರದಂತೆ ಎಚ್ಚರ ವಹಿಸಿ ಕಾರ್ಯನಿರ್ವಹಿಸಲು ಮುಂದಾಗುವುದಾಗಿ ತಿಳಿಸಿದರು.

ಡಿಜಿಟಲ್ ಯುಗದಲ್ಲಿ ಬ್ಯಾಂಕಿನ ಆಡಳಿತ ವ್ಯವಸ್ಥೆಯನ್ನು ತಾಂತ್ರಿಕವಾಗಿ ಅಭಿವೃದ್ಧಿಪಡಿಸುವುದು, ಎಟಿಎಂ, ನೆಟ್‌ಬ್ಯಾಂಕಿಂಗ್ ಅಳವಡಿಸುವುದು, ರೈತರಿಗೆ ಹೆಚ್ಚು ಬೆಂಬಲವಾಗಿ ನಿಂತು ಕೆಲಸ ಮಾಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ರೈತರಿಗೆ ಹೆಚ್ಚು ಸಾಲ ನೀಡುವ ಮೂಲಕ ಆರ್ಥಿಕವಾಗಿ ಸದೃಢಗೊಳ್ಳುವಂತೆ ಮಾಡುವ ಕಾರ್ಯಯೋಜನೆ ರೂಪಿಸಿಕೊಂಡಿರುವುದಾಗಿ ಹೇಳಿದರು.

ಬ್ರಹ್ಮದೇವರಹಳ್ಳಿ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕನಾಗಿ, ಅಧ್ಯಕ್ಷನಾಗಿ ಅಧಿಕಾರ ದೊರಕಿದ್ದು ಒಳ್ಳೆಯ ಅನುಭವವನ್ನು ನೀಡಿದೆ. ಸಂಘಗಳ ವ್ಯಾಪ್ತಿ, ಕಾರ್ಯವೈಖರಿ, ರೈತರಿಗೆ ಯಾವ ರೀತಿ ಸಹಕಾರಿಯಾಗಿ ನಿಲ್ಲಬಹುದು ಎಂಬುದನ್ನು ಕಲಿಸಿಕೊಟ್ಟಿದೆ. ಅದರ ಆಧಾರದ ಮೇಲೆ ಡಿಸಿಸಿ ಬ್ಯಾಂಕ್ ಅಧಿಕಾರ ಈಗ ದೊರಕಿದೆ. ಇದರ ವ್ಯಾಪ್ತಿ ಹೆಚ್ಚು ದೊಡ್ಡದಾಗಿರುವುದರಿಂದ ಇಲ್ಲಿ ಇನ್ನೂ ರೈತರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಿಕೊಡುವುದಕ್ಕೆ ಅವಕಾಶವಿದೆ ಎಂದು ಹೇಳಿದರು.

ಪಕ್ಷದಲ್ಲಿ ಕಳೆದೊಂದು ವರ್ಷದಿಂದಲೂ ಸಕ್ರಿಯನಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ನನ್ನ ಕಾರ್ಯವೈಖರಿಯನ್ನು ನೋಡಿ ಎಲ್ಲರೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಬ್ಯಾಂಕಿನಲ್ಲಿ ಎರಡೆರಡು ಬಾರಿ ಅಧ್ಯಕ್ಷರಾಗಿರುವ ಹಿರಿಯರಿದ್ದರೂ ನನಗೆ ಅವಕಾಶವನ್ನು ನೀಡಿದ್ದಾರೆ. ಅವರೆಲ್ಲರ ಸಹಕಾರದೊಂದಿಗೆ ಬ್ಯಾಂಕ್ ಅಭಿವೃದ್ಧಿಗೆ ದುಡಿಯುವುದಾಗಿ ಹೇಳಿದರು.

ಪ್ರಸ್ತುತ ಚಿತ್ರರಂಗಕ್ಕಿಂತ ರಾಜಕೀಯಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ. ಜವಾಬ್ದಾರಿಯುತ ಅಧಿಕಾರ ದೊರಕಿರುವುದರಿಂದ ರಾಜಕೀಯಕ್ಕೆ ಹೆಚ್ಚು ಸಮಯ ಮೀಸಲಿಡುವುದು ಅನಿವಾರ್ಯವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

--

ಅತಿ ಕಿರಿಯ ವಯಸ್ಸಿನ ಅಧ್ಯಕ್ಷನೆಂಬ ದಾಖಲೆ

ಕನ್ನಡಪ್ರಭ ವಾರ್ತೆ ಮಂಡ್ಯ

ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಅತಿ ಕಿರಿಯ (33) ವಯಸ್ಸಿನ ಯುವಕರೊಬ್ಬರಿಗೆ ಅಧ್ಯಕ್ಷ ಸ್ಥಾನ ದೊರಕಿದೆ. ಆ ದಾಖಲೆಯನ್ನು ಸಚಿನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇಷ್ಟೊಂದು ಕಿರಿಯ ವಯಸ್ಸಿಗೆ ಇದುವರೆಗೆ ಯಾರೊಬ್ಬರಿಗೂ ಅಧ್ಯಕ್ಷ ಸ್ಥಾನ ದೊರಕಿರಲಿಲ್ಲ. ವಯಸ್ಸು, ಅನುಭವ, ಕಾರ್ಯಕ್ಷಮತೆಯನ್ನು ಆಧರಿಸಿ ಅಧಿಕಾರವನ್ನು ನೀಡಲಾಗುತ್ತಿತ್ತು. ಬ್ಯಾಂಕಿಗೆ ಮೊದಲು ಒಂದು ಅಥವಾ ಎರಡು ಬಾರಿ ನಿರ್ದೇಶಕರಾಗಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು. ಆದರೆ, ಸಚಿನ್ ಚಲುವರಾಯಸ್ವಾಮಿ ಕೇವಲ ಎಂಟು ತಿಂಗಳ ಅವಧಿಯಲ್ಲಿ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಅಧ್ಯಕ್ಷರಾಗಿ ಅಧಿಕಾರ ನಡೆಸಿದ ಬಳಿಕ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿಯೂ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

PREV

Recommended Stories

ಕೆಪಿಎಸ್‌ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡಿಸಿ ಪ್ರತಿಭಟನೆ
ರೇಣುಕಾಂಬೆಯ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ಸಂಪನ್ನ