ದೌರ್ಜನ್ಯ ತಡೆಗಟ್ಟಲು, ಸಮಾನತೆಗಾಗಿ ಎಲ್ಲರೂ ಕೂಡಿ ಕೆಲಸ ಮಾಡೋಣ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ನರಗುಂದ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಸಭೆ ನಡೆಯಿತು. ಅಧಿಕಾರಿಗಳು ಸರ್ಕಾರದಿಂದ ಎಲ್ಲ ಇಲಾಖೆಗಳಿಗೆ ಬರುವ ಅನುದಾನ ಮತ್ತು ಮೀಸಲಾತಿ ಮಾಹಿತಿಯನ್ನು ಕೂಡಲೇ ಕೊಡಬೇಕೆಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಸಲಹೆ ನೀಡಿದರು.

ನರಗುಂದ: ಪರಿಶಿಷ್ಟ ಸಮುದಾಯದ ಜನಾಂಗದ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಮತ್ತು ಸಮಾನತೆಗಾಗಿ ಎಲ್ಲರೂ ಕೂಡಿಕೊಂಡು ಕೆಲಸ ಮಾಡೋಣ. ಸಮಾಜದಲ್ಲಿ ಅನಿಷ್ಟ ಪದ್ಧತಿ, ತಾರತಮ್ಯ ದೂರ ಮಾಡೋಣವೆಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದರು.

ಅವರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸರ್ಕಾರದಿಂದ ಎಲ್ಲ ಇಲಾಖೆಗಳಿಗೆ ಬರುವ ಅನುದಾನ ಮತ್ತು ಮೀಸಲಾತಿ ಮಾಹಿತಿಯನ್ನು ಕೂಡಲೇ ಕೊಡಬೇಕೆಂದು ಸಲಹೆ ನೀಡಿದರು. ಸಮಾಜ ಮುಖಂಡ ದತ್ತು ಜೋಗಣ್ಣವರ ಮಾತನಾಡಿ, ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿನ ಮಹಿಳಾ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆ. ತಾಲೂಕಿನ ಕೆಲವು ಗ್ರಾಮಗಳ ಚಹಾದ ಅಂಗಡಿಗಳಲ್ಲಿ ಪ್ರವೇಶ ನೀರಾಕರಿಸುವ ಅನಿಷ್ಟ ಪದ್ದತಿ ಇದೆ. ಎಲ್ಲ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟವಾಗುತ್ತಿದೆ. ಪಟ್ಟಣದಲ್ಲಿ ಮದ್ಯದಂಗಡಿಗಳು ಬೆಳಗ್ಗೆಯೇ ತೆರೆದುಕೊಳ್ಳುತ್ತಿವೆ. ಎಲ್ಲಾ ಮಾಂಸಾಹಾರಿ ಹೊಟೇಲಗಳಲ್ಲಿ ಮದ್ಯ ಸರಬರಾಜು ನಡೆಯುತ್ತಿದೆ. ಎಲ್ಲ ಅವ್ಯವಸ್ಥೆಗಳನ್ನು ಸರಿ ಮಾಡಬೇಕೆಂದು ಆಗ್ರಹ ಮಾಡಿದರು.

ಮುಖ್ಯಾಧಿಕಾರಿ ಅಮೀತ ತಾರದಾಳೆ ಮಾತನಾಡಿ, ವೀರ ಸಿಂಧೂರ ಲಕ್ಷ್ಮಣ ವೃತ್ತವು ಈಗಾಗಲೇ ಠರಾವಿನಲ್ಲಿ ಪಾಸು ಆಗಿದೆ. ವೃತ್ತಕ್ಕೆ ಸಂಬಂಧಿಸಿದಂತೆ ಉತಾರ ಸಿಗಲ್ಲ. ಆ ಸ್ಥಳವನ್ನು ಸ್ವಚ್ಛಗೊಳಿಸಿಕೊಡಲಾಗುವುದು. ಪುರಸಭೆಯ ನೂತನ ಕಟ್ಟಡ ನಿರ್ಮಾಣ ಆಗುವ ಸ್ಥಳದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಸ್ಥಳಾವಕಾಶ ಮತ್ತು ಕಟ್ಟೆಯನ್ನು ಕಟ್ಟಿಸಿ ಕೊಡಲಾಗುವುದು. ಪುತ್ಥಳಿಯನ್ನು ಸಮಾಜ ಬಾಂಧವರೇ ತಯಾರಿಸಿಕೊಳ್ಳಬೇಕೆಂದು ತಿಳಿಸಿದರು. ಮಾಜಿ ಪುರಸಭೆ ಉಪಾಧ್ಯಕ್ಷ ವಾಸು ಜೋಗಣ್ಣವರ ಮಾತನಾಡಿ, ತಾಲೂಕಿನಾದ್ಯಂತ ಇನ್ನೂ ಅನಿಷ್ಟ ಪದ್ಧತಿ ಉಳಿದುಕೊಂಡಿದೆ. ಜೊತೆಗೆ ಎಲ್ಲ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹೆಚ್ಚಾಗಿದೆ. ಇದರಿಂದ ಸಮಾಜದ ಬಹುತೇಕ ಕುಟುಂಬಗಳು ಮದ್ಯ ವ್ಯಸನಿಗಳಿಂದ ಆರ್ಥಿಕ ಹಿನ್ನಡೆ ಅನುಭವಿಸುತ್ತಿವೆ ಮತ್ತು ಅಗೌರವಕ್ಕೆ ತುತ್ತಾಗುತ್ತಿವೆ. ಅಬಕಾರಿ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮಕೈಗೊಂಡರೆ ಮಾತ್ರ ಈ ಸಭೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ಸಭೆಯಲ್ಲಿ ಚರ್ಚಿಸಿದ ವಿಷಯ: ಪಟ್ಟಣದ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಶಿಬಿರ ಏರ್ಪಡಿಸಬೇಕು. ಪಟ್ಟಣದಲ್ಲಿ ಕಳ್ಳತನ, ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಸಿಸಿ ಕ್ಯಾಮೆರಾ ಅಳವಡಿಸಬೇಕು. ತಾಲೂಕಿನಲ್ಲಿ ಎಸ್ಸಿಎಸ್ಟಿ ಜನಾಂಗದ ಬಗ್ಗೆ ತಾರತಮ್ಯವಿದೆ. ಕಾಲೋನಿಯಲ್ಲಿ ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಇಲ್ಲ. ಲೈಬ್ರರಿ ಹೆಚ್ಚಾಗಬೇಕು. ಸರ್ಕಾರಿ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಮತ್ತು ಕೋಚಿಂಗ್ ಸೆಂಟರ್‌ಗಳ ಹಾವಳಿಯಿಂದ ಶಾಲೆಗಳಲ್ಲಿ ಹಾಜರತಿ ಕೊರತೆ ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬಂದವು.ತಾಪಂ ಇಓ ಎಸ್ .ಕೆ. ಇನಾಮದಾರ, ಬಿಇಓ ಗುರುನಾಥ ಹೂಗಾರ, ವಾಸಣ್ಣ ಜೋಗಣ್ಣವರ, ಜಿ .ಜಿ. ತಳವಾರ, ಸದಾನಂದ ತಳವಾರ, ಶರಣಪ್ಪ ಚಲವಾದಿ, ನಾಗಪ್ಪ ದೊಡಮನಿ, ಶೇಖಪ್ಪ ಜಗದ, ಹನಮಂತ ರಾಮಣ್ಣವರ, ಹಾಗೂ ಸೇರಿದಂತೆ 22 ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Share this article