ಗದಗ: ನಮ್ಮ ಜಿಲ್ಲೆಯನ್ನು ನಶಾಮುಕ್ತ ಗದಗ ಜಿಲ್ಲೆಯನ್ನಾಗಿ ಮಾಡಲು ನಾವೆಲ್ಲ ಪಣ ತೊಡಬೇಕಿದೆ. ರಾಜ್ಯಾದ್ಯಂತ ನಶಾಮುಕ್ತ ಕ್ಯಾಂಪಸ್ ನಿರ್ಮಿಸುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಯತ್ನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.ನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಅದರ ಅಂಗ ಸಂಸ್ಥೆಗಳಾದ ಗದಗ ಜಿಲ್ಲೆಯ ಮೆಡಿಕಲ್, ಫಾರ್ಮಸಿ, ನರ್ಸಿಂಗ್, ಆಯುರ್ವೇದ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ಅಂಗಾಂಗ ದಾನ ಮತ್ತು ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೇ. 10ರಷ್ಟು ಯುವಜನಾಂಗ ನಶೆಯ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಕಳವಳಕಾರಿ. ಇದು ಒಬ್ಬ ವಿದ್ಯಾರ್ಥಿಯನ್ನು ಮಾತ್ರವಲ್ಲ, ಅವನ ಕುಟುಂಬ, ಸಮಾಜ ಹಾಗೂ ಇಡೀ ದೇಶವನ್ನೇ ಸಂಕಷ್ಟಕ್ಕೆ ದೂಡುವಂತಹ ಸಂಗತಿ. ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದರ ವಿರುದ್ಧ ಹೋರಾಡಬೇಕಿದೆ ಎಂದರು.ಇಂದು ಇಲ್ಲಿ ನೆರೆದಿರುವಂತಹ ಎಲ್ಲ ವಿದ್ಯಾರ್ಥಿಗಳು, ಯುವಜನರು, ಪೋಷಕರು ಹಾಗೂ ಅಧ್ಯಾಪಕ ವರ್ಗದವರು ನಾನು ನಶೆಯ ಗುಲಾಮನಾಗುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳಬೇಕು. ಹಾಗೆಯೇ ಸ್ನೇಹಿತರನ್ನು, ಬಂಧುಗಳನ್ನು ನಶೆಯ ಜಗತ್ತಿಗೆ ಪ್ರವೇಶಿಸದಂತೆ ತಡೆಯಬೇಕು. ದುಶ್ಚಟಗಳ ಬಳಿ ಸಾಗದಂತೆ ಸ್ನೇಹಿತರನ್ನು ತಡೆಯುವುದು ಅಥವಾ ದುಶ್ಚಟಗಳಿಂದ ಅವರನ್ನು ಮುಕ್ತಗೊಳಿಸುವುದು ಸ್ನೇಹಿತರಿಗೆ ನೀವು ಕೊಡುವ ಬಹುದೊಡ್ಡ ಉಡುಗೊರೆ ಎಂದರು.ಗದಗ ಜಿಲ್ಲೆಗೆ 4ನೇ ಸ್ಥಾನ:ಅಂಗಾಂಗ ದಾನದಲ್ಲಿ ಗದಗ ಜಿಲ್ಲೆ 4ನೇ ಸ್ಥಾನದಲ್ಲಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. 20ನೇ ಸ್ಥಾನದಲ್ಲಿದ್ದ ಗದಗ 4ನೇ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರ ಒಟ್ಟು ಪ್ರಯತ್ನ ಕಾರಣವಾಗಿದೆ. ಅಂಗಾಂಗ ದಾನದ ಬಗ್ಗೆ ಗದಗ ಜಿಲ್ಲೆಯಲ್ಲಿ ಚಳವಳಿಯ ರೂಪದ ಜಾಗೃತಿಯನ್ನು ಮೂಡಿಸಿದ ಕೀರ್ತಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಕುಲಪತಿ ಡಾ. ಬಿ.ಸಿ. ಭಗವಾನ್ ಅವರಿಗೆ ಗದುಗಿನ ಮೇಲೆ ಹೆಚ್ಚು ಪ್ರೀತಿ ಎಂದರು.ಗದಗ ಜಿಲ್ಲೆಯನ್ನು ಸಹಕಾರಿ ಕ್ಷೇತ್ರದ ತೊಟ್ಟಿಲು ಎಂದು ಕರೆಯುತ್ತೇವೆ. ಜಿಲ್ಲೆಗೂ ಸಹಕಾರಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಜಿಲ್ಲೆಯ ಸಹಕಾರ ಕ್ಷೇತ್ರದ ಚಳವಳಿಯಲ್ಲಿ ನಮ್ಮ ತಂದೆ ಕೆ.ಎಚ್. ಪಾಟೀಲ ಹಾಗೂ ಬಿ.ಎಸ್. ವಿಶ್ವನಾಥ್ ಅವರ ಹೆಸರು ಮುಂಚೂಣಿಯಲ್ಲಿವೆ. ಕುಲಪತಿ ಬಿ.ಸಿ. ಭಗವಾನ್ ಅವರು ವಿ.ಎಸ್. ವಿಶ್ವನಾಥ್ ಅವರ ಅಳಿಯ. ಈ ನಂಟೇ ಅವರನ್ನು ಗದಗ ಜಿಲ್ಲೆಯ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಆದ್ಯತೆಯಾಗಬೇಕು. ಆರೋಗ್ಯವಂತ ಯುವಕರು ಮಾತ್ರ ಸ್ವಸ್ಥ ಸಮಾಜವನ್ನು ಕಟ್ಟಬಲ್ಲರು. ಹೀಗಾಗಿ ಯುವಕರನ್ನು ಆರೋಗ್ಯಪೂರ್ಣ ಜೀವನದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ವಿದ್ಯಾರ್ಥಿಗಳನ್ನು ಹಾಗೂ ವೈದ್ಯಕೀಯ ವೃತ್ತಿಪರರನ್ನು ಗಮನದಲ್ಲಿ ಇಟ್ಟುಕೊಂಡು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯವು ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಸೇರಿದಂತೆ ಹಲವಾರು ಅಭಿಯಾನಗಳನ್ನು ರಾಜ್ಯವ್ಯಾಪಿಯಾಗಿ ಹಮ್ಮಿಕೊಳ್ಳಲು ಮುಂದಾಗಿದೆ. ಈ ಪ್ರಯತ್ನವನ್ನು ಜಿಲ್ಲೆಯಿಂದ ಆರಂಭಿಸುತ್ತಿರುವುದು ಸಂತಸ ತಂದಿದೆ ಎಂದರು.ದೇಶದ ಭವಿಷ್ಯವನ್ನು ನಿರ್ಧರಿಸುವ ಯುವಕರನ್ನು ನಶೆಯ ಹಿಡಿತದಿಂದ ಆಚೆ ತಂದರೆ ದೇಶದ ಅಭಿವೃದ್ಧಿ ನಿಶ್ಚಯವಾಗಿ ಆಗುತ್ತದೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯವು ನಶಾಮುಕ್ತ ಕ್ಯಾಂಪಸ್ ನಿರ್ಮಿಸುವ ಧ್ಯೇಯೋದ್ದೇಶವನ್ನು ಹೊಂದಿದೆ ಎಂದರು.ಹಾಲ್ಟ್ ಸಾಲ್ಟ್ ಅಭಿಯಾನ: ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಉಪ್ಪಿನ ಸೇವನೆಗೆ ಕಡಿವಾಣ ಹಾಕಲು ಹಾಲ್ಟ್ ಸಾಲ್ಟ್ ಅಭಿಯಾನವನ್ನು ಕೈಗೊಳ್ಳಲಾಗಿದೆ. ಉಪ್ಪಿನ ಬಳಕೆಯನ್ನು ಕಡಿಮೆ ಮಾಡಲು ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ನಾವು ಪ್ರತಿದಿನ ಶೇ. 5ರಷ್ಟು ಉಪ್ಪನ್ನು ಬಳಸಬೇಕು ಎನ್ನುವ ಎಚ್ಚರಿಕೆಯನ್ನು ಮೀರಿ ಶೇ. 20ರಿಂದ 30ರಷ್ಟು ಹೆಚ್ಚು ಪ್ರಮಾಣದ ಉಪ್ಪನ್ನು ಆಹಾರದಲ್ಲಿ ಬಳಸುತ್ತೇವೆ. ಇದರಿಂದ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಯುವ ಸಮುದಾಯದಲ್ಲಿ ಬ್ರೇನ್ ಸ್ಟ್ರೋಕ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಅಧಿಕ ರಕ್ತದೊತ್ತಡದಂತಹ ಜೀವನ ಶೈಲಿ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿವೆ ಎಂದರು.ಕೆ.ಎಚ್. ಪಾಟೀಲ ಕ್ರೀಡಾಂಗಣದಿಂದ ಆರಂಭವಾದ ವಾಕ್ ಥಾನ್ ಗಾಂಧಿ ಸರ್ಕಲ್ ಮೂಲಕ ಹಳೆ ಡಿಸಿ ಕಚೇರಿ ಸರ್ಕಲ್‌ವರೆಗೆ ಸಾಗಿತು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಡಾ. ಬಸವರಾಜ ಬೊಮ್ಮನಹಳ್ಳಿ, ಪ್ರಭು ಎಲ್. ಬುರಬುರೆ, ಡಾ. ಎಸ್.ಎಸ್. ನೀಲಗುಂದ, ಡಾ. ಕಿರಣ ಕುಳಗೇರಿ, ಡಾ. ಜೀವನ್ನವರ್, ಡಾ. ವೀರೇಶ ಹಂಚಿನಾಳ, ಡಾ. ಜಗದೀಶ ಕೋನರೆಡ್ಡಿ, ಡಾ. ಸಂಕನಗೌಡ ಪಾಟೀಲ, ಡಾ. ಸಂತೋಷ ಇಂಡಿ ಇದ್ದರು.