ಕನ್ನಡಪ್ರಭ ವಾರ್ತೆ ಬೆಂಗಳೂರು
ಸಕ್ರಿಯ ರಾಜಕಾರಣದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದ ವೇಳೆ ‘ರೈತ ನಾಯಕ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಡಿಯೂರಪ್ಪ ಅವರಿಗೆ ಪಕ್ಷದಿಂದ ನೇಗಿಲ ಪ್ರತಿರೂಪ ನೀಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಅವರು, ಯಾವತ್ತೂ ಸಾಧನೆ ಮಾತನಾಡಬೇಕು. ಮಾತನಾಡುವುದೇ ಸಾಧನೆ ಆಗಬಾರದು ಎಂದರು.
ಎಲ್ಲಿ ಕರೆದರೂ ಬರಲು ಸಿದ್ಧ:ನನಗೆ ಈಗ 83 ವರ್ಷ. ದೇವರ ದಯೆಯಿಂದ ಇನ್ನೂ ಐದಾರು ವರ್ಷ ಗಟ್ಟಿಯಾಗಿ ಓಡಾಡುವ ವಿಶ್ವಾಸವಿದೆ. ನೀವು ಯಾವ ಸಮಯದಲ್ಲಿ ಎಲ್ಲಿಗೆ ಕರೆದರೂ ಅಲ್ಲಿಗೆ ಬರಲು ಸಿದ್ಧನಿದ್ದೇನೆ. ನಾವೆಲ್ಲಾ ಒಟ್ಟಾಗಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡೋಣ ಎಂದರು.
ಶಿಕಾರಿಪುರದಿಂದ ಆರಂಭವಾಗಿ ಇಡೀ ರಾಜ್ಯಾದ್ಯಂತ ತಮ್ಮ ನೇತೃತ್ವದಲ್ಲಿ ನಡೆದ ಜನಪರ ಹೋರಾಟಗಳು, ಪಾದಯಾತ್ರೆಗಳು, ಜಾಥಾಗಳು ಹಾಗೂ ಪಕ್ಷ ಸಂಘಟನೆ ಪ್ರವಾಸಗಳ ಕುರಿತು ಹಂಚಿಕೊಂಡ ಯಡಿಯೂರಪ್ಪ, ರಾಜ್ಯದ ಉದ್ದಗಲಕ್ಕೂ ಹಗಲು-ರಾತ್ರಿ ಪ್ರವಾಸ ಮಾಡಿ ರಾಜ್ಯದಲ್ಲಿ ಬದಲಾವಣೆ ತರುವಲ್ಲಿ ಶ್ರಮಿಸಿದ ದಿವಂಗತ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ನೀಡಿದ ಬೆಂಬಲ ಸ್ಮರಿಸಿದರು.ಬೆಳವಣಿಗೆಗೆ ಆರ್‌ಎಸ್‌ಎಸ್ ಪ್ರೇರಣೆ ಕಾರಣ:
ಪುರಸಭೆ ಸದಸ್ಯನಾಗಿ ರಾಜಕೀಯ ಜೀವನ ಶುರು ಮಾಡಿ ಈ ಮಟ್ಟಕ್ಕೆ ಏರುವಲ್ಲಿ ಪಕ್ಷದ ಕಾರ್ಯಕರ್ತರ ಬೆಂಬಲ ಮರೆಯುವಂತಿಲ್ಲ. ಅಂದಿನ ನಾಯಕರಾದ ಬಿ.ಬಿ.ಶಿವಪ್ಪ, ವಸಂತ ಬಂಗೇರಾ, ಎ.ಕೆ.ಸುಬ್ಬಯ್ಯ, ಡಿ.ಎಚ್.ಶಂಕರಮೂರ್ತಿ, ರಾಮಚಂದ್ರೇಗೌಡ ಸೇರಿ ಹಲವು ನಾಯಕರ ಬೆಂಬಲದಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಇಷ್ಟು ಗಟ್ಟಿಯಾಗಿ ಕಟ್ಟಲು ಸಾಧ್ಯವಾಗಿದೆ ಎಂದು ತಿಳಿಸಿದರು.ಪಕ್ಷವನ್ನು ಉತ್ತುಂಗಕ್ಕೆ ಸೇರಿಸಿದ ನಾಯಕ-ಡಿವಿಎಸ್:
ಬೂಕನಕೆರೆಯಿಂದ ಹೊರಟು ಶಿಕಾರಿಪುರಕ್ಕೆ ಹೋಗಿ ಅಲ್ಲಿಂದ ಬೆಂಗಳೂರು, ದೆಹಲಿವರೆಗೆ ತೆರಳುವ ಎಲ್ಲ ಸಂದರ್ಭದಲ್ಲೂ ದೊಡ್ಡ ಸಂಘರ್ಷ ಎದುರಿಸಿದ್ದರು. ಸಂಘರ್ಷದ, ಸಂಘಟನೆಯ ಅದ್ಭುತ ಹಾದಿಯಲ್ಲಿ ಅವರು ನಡೆದು ಬಂದಿದ್ದಾರೆ. ಕಾರ್ಯಕರ್ತರು ಹಾಗೂ ಮುಖಂಡರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನಾಯಕ ನಮ್ಮ ಬಿ.ಎಸ್.ಯಡಿಯೂರಪ್ಪ ಎಂದು ಅವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಮಾಡಿದ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅರಮನೆ ಮೈದಾನದಲ್ಲಿ ಗುರುವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿ, ಕರ್ನಾಟಕವು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಭ್ರಷ್ಟ ರಾಜ್ಯವಾಗಿದೆ. ಆರ್ಥಿಕವಾಗಿ ದಿವಾಳಿಯಾಗಿದೆ. ಬಿಜೆಪಿ ಕಾರ್ಯಕರ್ತರು ರಾಜ್ಯದ ಮನೆ-ಮನೆಗೆ ತೆರಳಿ ಕಾಂಗ್ರೆಸ್‌ನ ವೈಫಲ್ಯ ತಿಳಿಸಬೇಕು. ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.ಬಿಎಸ್‌ವೈ ಕೊಡುಗೆ ದೊಡ್ಡದು: ಇದು ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ವಿಚಾರಧಾರೆ ಮನನ ಮಾಡುವ ಸಭೆ. ಸಂಘಟನೆ, ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ತೊಲಗಿಸಿ ಅಧಿಕಾರ ಮರಳಿ ಪಡೆಯುವ ಸಂಕಲ್ಪದ ಸಭೆ. ಕರ್ನಾಟಕದಲ್ಲಿ ಪಕ್ಷ ಮುನ್ನಡೆಸುವ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆ ದೊಡ್ಡದಿದೆ ಎಂದು ಮೆಚ್ಚುಗೆ ಸೂಚಿಸಿದರು.ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕವು ಭ್ರಷ್ಟ ರಾಜ್ಯವಾಗಿದೆ. ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮುಡಾ ಸೇರಿದಂತೆ ವಿವಿಧ ಹಗರಣಗಳನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಸರ್ಕಾರದ ಆರಂಭದಲ್ಲೇ ಮುಖ್ಯಮಂತ್ರಿ ಪದವಿಗೆ ಒಳಜಗಳ ಇತ್ತು. ಅದು ಈಗಲೂ ಮುಂದುವರೆದಿದೆ. ಇದು ಜನಾದೇಶಕ್ಕೆ ಮಾಡಿದ ಅಪಮಾನ. ಜನರು ಗ್ಯಾರಂಟಿಗಳು ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಸರ್ಕಾರದ ಸಾಲದ ಪ್ರಮಾಣ ತೀವ್ರ ಹೆಚ್ಚಳವಾಗಿದೆ. ಈ ದುರಾಡಳಿತಕ್ಕೆ ರಾಜ್ಯದ ಜನ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.ಭ್ರಷ್ಟ ಸರ್ಕಾರದಿಂದ ಬೇಸತ್ತ ಜನ-ಅಗರ್‌ವಾಲ್:ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಅನ್ಯ ರಾಜ್ಯಗಳ ಚುನಾವಣೆಗೆ ಹಣ ಹೋಗುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕೆಲ ತಪ್ಪುಗಳಿಂದ ಕಡಿಮೆ ಸ್ಥಾನಗಳು ಬಂದವು. ಜನರಿಗೂ ತಮ್ಮ ತಪ್ಪಿನ ಅರಿವಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾವನ್ನು ಕಿತ್ತು ಒಗೆಯುತ್ತೇವೆ ಎಂದರು.ಕಾಂಗ್ರೆಸ್ ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ವಿರೋಧ ಪಕ್ಷಗಳ ಮುಖಂಡರನ್ನು ಜೈಲಿಗೆ ಕಳುಹಿಸಿತ್ತು. ಈಗ ಅದೇ ಮುಖಂಡರು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುತ್ತಿದ್ದಾರೆ. ದೇಶವನ್ನು ವಿಕಸಿತ ಭಾರತವಾಗಿ ಪರಿವರ್ತಿಸಲು ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಶೇಖಾವತ್ ಹೇಳಿದರು.
-ಕೋಟ್-
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.