ಕಾರವಾರ: ಯಾವುದೇ ಕಾರ್ಯಗಳು ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಯಶಸ್ಸು ಕಾಣುವುದು ಅಸಾಧ್ಯ. ಆದ್ದರಿಂದ ಸಾರ್ವಜನಿಕರಿಗೆ ನೆಲ- ಜಲ- ಪರಿಸರ ಕಾಪಾಡುವ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗೋಣ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ತಿಳಿಸಿದರು.
ಅಮೃತ ಸರೋವರವನ್ನು ಮನರೇಗಾ ಯೋಜನೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಜತೆಗೂಡಿ, ಜಿಪಂ ಮತ್ತು ತಾಪಂ ಅನಿರ್ಬಂಧಿತ, 15ನೇ ಹಣಕಾಸು ಅನುದಾನದಡಿ ಅಭಿವೃದ್ಧಿಪಡಿಸಲಾಗಿದ್ದು, ಉತ್ತಮ ಯೋಜನೆ ಮತ್ತು ಅನುಷ್ಠಾನದ ಮೂಲಕ ರಾಜ್ಯದಲ್ಲಿಯೇ ಮಾದರಿ ಅಮೃತ ಸರೋವರವಾಗಿ ಹೊರಹೊಮ್ಮಿದೆ. ಬೆಟ್ಟ- ಗುಡ್ಡ, ಹಚ್ಚಹಸಿರಿನ ಕಾನನದ ಮಧ್ಯೆ ಸುಮಾರು 25 ಎಕರೆಯಷ್ಟು ವಿಶಾಲವಾಗಿ ಹರಡಿಕೊಂಡಿರುವ ಈ ಸರೋವರವನ್ನು ಅಭಿವೃದ್ಧಿ ಪಡಿಸಲು ಇನ್ನೂ ಸಾಕಷ್ಟು ಅವಕಾಶಗಳಿವೆ. ಹಂತ- ಹಂತವಾಗಿ ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಜಿಪಂ ಯೋಜನಾ ನಿರ್ದೇಶಕ ಮಂಜುನಾಥ ನಾವಿ, ಕಾರವಾರ ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ, ಆರ್‌ಎಫ್‌ಒ ಕಿರಣ ಮೊದಲಾದವರು ಇದ್ದರು.ಭೀಮಕೋಲ್‌ದಲ್ಲಿ ವಾಟರ್ ಆಕ್ಟಿವಿಟಿ, ಟ್ರೆಕ್ಕಿಂಗ್ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿಶಾಲವಾದ ಭೀಮ್‌ಕೋಲ್ ಸರೋವರದಲ್ಲಿ ಕಯಾಕಿಂಗ್, ಬೋಟಿಂಗ್ ಸೇರಿದಂತೆ ವಿವಿಧ ಮನರಂಜನಾ ಕ್ರೀಡೆಗಳನ್ನು ಜೋಡಿಸಲು ಮತ್ತು ಸರೋವರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶ, ಬೆಟ್ಟ- ಗುಡ್ಡ, ಜಲಪಾತವನ್ನು ಸಮರ್ಪಕವಾಗಿ ಬಳಸಿಕೊಂಡು ಚಾರಣ ತಾಣವಾಗಿ ರೂಪಿಸಲು ಯೋಜನೆ ನಡೆಸಲಾಗಿದೆ.