ಸಮಾಜದಲ್ಲಿ ಪರಿಸರ ಸಾಕ್ಷರತೆ ಮೂಡಲಿ

KannadaprabhaNewsNetwork |  
Published : Jun 09, 2025, 05:12 AM IST
8ಎಚ್‌ಯುಬಿ33ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಪರಿಸರಕ್ಕಾಗಿ ಓಟಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಕೆರೆ, ಕಾಡು, ಬೆಟ್ಟ ಗುಡ್ಡಗಳನ್ನು ಉಳಿಸಲು ಜಾಗೃತಿ ಮೂಡಿಸಬೇಕು. ಮರಗಳು ಇಲ್ಲದ ಕಾರಣಕ್ಕೆ ಮನುಷ್ಯನ ಆಯುಷ್ಯ ಕಡಿಮೆ ಆಗುತ್ತಿದೆ. ಮಕ್ಕಳಲ್ಲಿ ಪರಿಸರ ಕಾಳಜಿ, ಪ್ರೀತಿ ಕಡಿಮೆಯಾಗಿದೆ. ಅದನ್ನು ಬೆಳೆಸುವ ಕೆಲಸವಾಗಬೇಕಿದೆ. ಮಣ್ಣಿನ ಸಂಬಂಧ ಮಕ್ಕಳಿಗೆ ಬೆಳೆಸಬೇಕಿದೆ.

ಹುಬ್ಬಳ್ಳಿ: ನಾವು ಸಾಕ್ಷರತೆಯಲ್ಲಿ ಮುಂದಿದ್ದೇವೆ. ಆದರೆ, ಪರಿಸರ ಸಾಕ್ಷರತೆಯಲ್ಲಿ ಹಿಂದುಳಿದಿದ್ದೇವೆ. ಎಲ್ಲರೂ ಗಿಡ ಮರ ಬೆಳೆಸುವ ಪ್ರತಿಜ್ಞೆ ಮಾಡೋಣ, ಪ್ರತಿಯೊಂದು ಕುಟುಂಬವೂ ಸಸಿ ಉಳಿಸುತ್ತೇವೆ ಎಂಬ ನಿರ್ಧಾರ ಮಾಡಿ, ಆಗ ಪ್ರಕೃತಿ ಉಳಿದು ಬೆಳೆಯಲಿದೆ ಎಂದು ಪರಿಸರ ಪ್ರೇಮಿ ಶಿವಾನಂದ ಕಳವೆ ಹೇಳಿದರು.

ಪರಿಸರ ರಕ್ಷಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಸುಂಧರಾ ಫೌಂಡೇಶನ್ ಹಾಗೂ ವಿ-ಕೇರ್ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಲಾಗಿದ್ದ ಪರಿಸರಕ್ಕಾಗಿ ಓಟ (ರನ್ ಫಾರ್ ನೇಚರ್)ದಲ್ಲಿ ಅವರು ಮಾತನಾಡಿದರು.

ಕೆರೆ, ಕಾಡು, ಬೆಟ್ಟ ಗುಡ್ಡಗಳನ್ನು ಉಳಿಸಲು ಜಾಗೃತಿ ಮೂಡಿಸಬೇಕು. ಮರಗಳು ಇಲ್ಲದ ಕಾರಣಕ್ಕೆ ಮನುಷ್ಯನ ಆಯುಷ್ಯ ಕಡಿಮೆ ಆಗುತ್ತಿದೆ. ಮಕ್ಕಳಲ್ಲಿ ಪರಿಸರ ಕಾಳಜಿ, ಪ್ರೀತಿ ಕಡಿಮೆಯಾಗಿದೆ. ಅದನ್ನು ಬೆಳೆಸುವ ಕೆಲಸವಾಗಬೇಕಿದೆ. ಮಣ್ಣಿನ ಸಂಬಂಧ ಮಕ್ಕಳಿಗೆ ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.

ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ಭೂಮಿಯು ಸರಳ, ಸ್ವಾಭಿಮಾನದ ಜೀವನ ಕಲಿಸಿಕೊಟ್ಟಿದೆ. ರಾಸಾಯನಿಕದಿಂದ ಭೂಮಿ ತನ್ನ ಆರೋಗ್ಯ ಕಳೆದುಕೊಂಡಿದೆ. ಅದನ್ನು ಸಾವಯವದ ಮೂಲಕ ಉಳಿಸಬೇಕಿದೆ ಎಂದು ತಿಳಿಸಿದರು. ಪರಿಸರಕ್ಕಾಗಿ ಓಟ (ರನ್ ಫಾರ್ ನೇಚರ್)ದಲ್ಲಿ ಸಾವಿರಾರು ಜನರು ಪಾಲ್ದೊಂಡರು. ತೋಳನಕೆರೆಯಿಂದ ಆರಂಭವಾದ ಓಟ, ಕಾಡಸಿದ್ದೇಶ್ವರ ಕಾಲೇಜು ತಲುಪಿ, ಅಲ್ಲಿಂದ ಪುನಃ ತೋಳನಕೆರೆವರೆಗೆ ನಡೆಯಿತು. ಭಾಗವಹಿಸಿದವರಿಗೆಲ್ಲರಿಗೂ ಇ-ಸರ್ಟಿಫಿಕೇಟ್ ಹಾಗೂ ಮಾವಿನ ಸಸಿಗಳನ್ನು ನೀಡಲಾಯಿತು. ಟಿ-ಶರ್ಟ್ ಕೂಡ ಕೊಡಲಾಗಿತ್ತು.

ಓಟದಲ್ಲಿ ಪಾಲ್ಗೊಳ್ಳಲು 1700 ಜನ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದ್ದರು. ನೇರವಾಗಿ ಬಂದು ೩ ಸಾವಿರ ನಾಗರಿಕರು ಭಾಗವಹಿಸಿ ಗಮನಸೆಳೆದರು. ಓಟದಲ್ಲಿ ಪಾಲ್ಗೊಂಡಿದ್ದ ೫ ಸಾವಿರಕ್ಕೂ ಹೆಚ್ಚು ಜನರಿಗೆ ಮನೆಗೊಂದು ಮರ ಎನ್ನುವ ಧ್ಯೇಯದಂತೆ ಸಂಘಟಕರು ಮಾವಿನ ಸಸಿಗಳನ್ನು ವಿತರಿಸಿದರು. ಈ ವರ್ಷ ಒಂದು ಲಕ್ಷ ಸಸಿಗಳನ್ನು ವಿತರಿಸಿ ಅವುಗಳನ್ನು ಬೆಳೆಸಲು ಸಾರ್ವಜನಿಕರನ್ನು ಉತ್ತೇಜಿಸುವ ಪಣ ತೊಟ್ಟಿರುವುದಾಗಿ ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ ಹೇಳಿದರು.

ಪರಿಸರ ಸಂರಕ್ಷಣಾ ಕಾರ್ಯಕ್ಕೆ ಕ್ಷಮತಾ ಸೇವಾ ಸಂಸ್ಥೆಯೂ ಸಾಥ್ ನೀಡಲಿದೆ ಎಂದು ಸಂಚಾಲಕ ಗೋವಿಂದ ಜೋಶಿ ತಿಳಿಸಿದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಶಾಸಕ ಮಹೇಶ ಟೆಂಗಿನಕಾಯಿ ಪರಿಸರ ಓಟಕ್ಕೆ ಚಾಲನೆ ನೀಡಿದರು. ವಸುಂಧರಾ ಫೌಂಡೇಶನ್ ಅಧ್ಯಕ್ಷ ಮೇಘರಾಜ್ ಕೆರೂರ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ