ಕನ್ನಡಪ್ರಭ ವಾರ್ತೆ ಉಡುಪಿಈಗ ದೇಶ ಸಂಕಷ್ಟದಲ್ಲಿದೆ, ವೈರಿ ರಾಷ್ಟ್ರ ನಮ್ಮ ಮೇಲೆ ಏರಿ ಬರುತ್ತಿದೆ, ನಮ್ಮ ನಡುವೆ ನೂರು ಭಿನ್ನಮತಗಳಿದ್ದರೂ, ಭಾರತ ದೇಶದ ಮಾತು ಬಂದಾಗ ಎಲ್ಲರೂ ಒಂದಾಗಬೇಕು, ಆದ್ದರಿಂದ ಈ ಸಂಕಷ್ಟದ ನಾವು ಒಗ್ಗಟ್ಟಾಗಿ ಎದುರಿಸಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಅವರು ಶನಿವಾರ ಕಾಪು ನವೀಕೃತ ಮಾರಿಯಮ್ಮ ಗುಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಭಾರತ - ಪಾಕ್ ಯುದ್ಧದ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಅವಹೇಳನ ಮಾಡುವ ಮನಸ್ಥಿತಿಯವರು ಸಮಾಜಘಾತಕರು, ಅವರಿಗೆ ನಾನು ಕಠಿಣ ಶಬ್ದದಿಂದ ಎಚ್ಚರಿಸುತ್ತೇನೆ, ಅವರಿಗೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದರು.ಸೋಫಿಯಾ ಬಗ್ಗೆ ಹೆಮ್ಮೆ:ಯುದ್ದದ ಬಗ್ಗೆ ದೇಶದ ಜನತೆಗೆ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಶಿ ನಮ್ಮ ಬೆಳಗಾವಿಯ ಸೊಸೆ. ನಮ್ಮ ಗೋಕಾಕ್ ತಾಲೂಕಿನ ಬಾಗೇವಾಡಿ ಕುಟುಂಬದ ಹೆಮ್ಮೆಯ ಸೊಸೆಯಾಗಿದ್ದಾರೆ. ಕರುನಾಡಿನ ಸೊಸೆ ಅನ್ನೋದು ನಮಗೆ ಹೆಮ್ಮೆ, ಸೋಫಿಯಾ ಮತ್ತು ವ್ಯೂಮಿಕಾ ಸಿಂಗ್ ವೈರಿಗಳು ನಮ್ಮ ಮೇಲೆ ಮಾಡಿದ ಪ್ರಹಾರವನ್ನು ಯಾವ ರೀತಿ ದೇಶ ಹಿಮ್ಮೆಟ್ಟಿಸಿದೆ ಎಂದು ವಿವರಿಸುವಾಗ ರೋಮಾಂಚನವಾಗುತ್ತದೆ ಎಂದು ಸಚಿವೆ ಸಂತಸ ವ್ಯಕ್ತಪಡಿಸಿದರು.ಅಂತಿಮ ತೀರ್ಮಾನ ಸಿದ್ಧ:
ಜಾತಿಗಣತಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳ್ಕರ್, ಲಿಂಗಾಯತ ಸಮುದಾಯದ ಏಳು ಮಂತ್ರಿಗಳು ಒಟ್ಟಾಗಿ ಚರ್ಚೆ ಮಾಡಿ ಒಂದು ಅಂತಿಮ ಅಭಿಪ್ರಾಯಕ್ಕೆ ಬಂದಿದ್ದೇವೆ, ಅದನ್ನು ಪತ್ರದಲ್ಲಿ ಬರೆದಿದ್ದೇವೆ. ಎಲ್ಲರೂ ಸಹಿ ಮಾಡಿ ಸರ್ಕಾರಕ್ಕೆ ನೀಡುವುದೆಂದು ತೀರ್ಮಾನ ಮಾಡಿದ್ದೇವೆ. ಇದಕ್ಕಿಂತ ಹೆಚ್ಚಿನದೇನೂ ಈಗ ಹೇಳಲಿಕ್ಕಾಗುವುದಿಲ್ಲ ಎಂದರು.ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವೆ, ಅದರ ನಂತರ ಪ್ರಥಮ ಬಾರಿಗೆ ಶನಿವಾರ ಉಡುಪಿಗೆ ಭೇಟಿ ನೀಡಿದ್ದು, ಖುಷಿಯಿಂದ ಮತ್ತೆ ಮರಳಿ ಕೆಲಸಕ್ಕೆ ಬಂದಿದ್ದೇನೆ, ಕಾಪು ಮಾರಿ ಅಮ್ಮನ ಆಶೀರ್ವಾದ ಪಡೆದು ಕೆಲಸ ಆರಂಭಿಸುತ್ತಿದ್ದೇನೆ. ದೇವಿಯ ಸನ್ನಿಧಾನದಲ್ಲಿ ಉತ್ತಮ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದರು.ಈ ಸಂದರ್ಭದಲ್ಲಿ ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಶಾಸಕ ಸುರೇಶ್ ಶೆಟ್ಟಿ, ಪ್ರಮುಖರಾದ ನಡಿಕೆರೆ ರತ್ನಾಕರ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು