ಹಿರಿಯೂರು: ಜಿಲ್ಲೆಯ ಎಲ್ಲಾ ತಾಲೂಕಿನ ರೈತ ಮುಖಂಡರು ಮಂಗಳವಾರ ಮಾರಿಕಣಿವೆಯ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವ 5300 ಕೋಟಿ ರು. ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ರಾಜ್ಯ ಸರ್ಕಾರ 5000 ಕೋಟಿ ರು. ಹಣವನ್ನು ಈ ಬಜೆಟ್ ಅಧಿವೇಶನದಲ್ಲಿ ಮೀಸಲಿಡಬೇಕು. ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಎಲ್ಲಾ ತಾಲೂಕು ಕಚೇರಿ ಮುಂಭಾಗದಲ್ಲಿ ಬರುವ 30ನೇ ತಾರೀಖಿನಂದು ಅನಿರ್ದಿಷ್ಟಾವಧಿ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯ ಆರು ತಾಲೂಕುಗಳನ್ನು ಏಕಕಾಲದಲ್ಲಿ ಬಂದ್ ಮಾಡಿ ಸರ್ಕಾರಕ್ಕೆ ತೀವ್ರತರದ ಒತ್ತಡ ತರಲಾಗುವುದು. ಇದಕ್ಕೂ ಸರ್ಕಾರ ಸ್ಪಂದಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸಿವೆ. ಈಗ ಬಂತು ಆಗ ಬಂತು ಅಲ್ಲಿ ಬಂತು ಇಲ್ಲಿ ಬಂತು ಎಂದು ಇಲ್ಲದ ಸಬೂಬುಗಳನ್ನು ಹೇಳುತ್ತಾ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ರೈತರಿಗೆ ಸಮರ್ಪಕವಾಗಿ ಸಮಗ್ರ ನೀರಾವರಿ ಮಾಡಬೇಕು ಎಂದು ಸರ್ಕಾರಗಳ ಮೇಲೆ ತೀವ್ರತರದ ಒತ್ತಡ ತರುವ ಹೋರಾಟವನ್ನು ಮಾಡಬೇಕಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಆಳುವ ಸರ್ಕಾರಗಳು ಒಂದಲ್ಲ ಒಂದು ರೀತಿ ಮೋಸ ಮಾಡುತ್ತಲೇ ಬಂದಿವೆ. ನೀರು ಬಂದರೆ ಮುಗಿಯುವುದಿಲ್ಲ. ಬೆಂಬಲ ಬೆಲೆ, ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ಆದ್ದರಿಂದ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡಬೇಕು ಎಂದು ಕೆರೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಬಸವ ರೆಡ್ಡಿ, ಮೊಳಕಾಲ್ಮೂರು ನೀರಾವರಿ ಸಮಿತಿ ಅಧ್ಯಕ್ಷ ನಾಗರಾಜ್, ಹಿರಿಯೂರು ತಾಲೂಕು ಅಧ್ಯಕ್ಷ ಸಿದ್ದರಾಮಣ್ಣ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಹೊಸದುರ್ಗ ತಾಲೂಕು ಅಧ್ಯಕ್ಷ ಚಿತ್ತಪ್ಪ, ಚಳಕೆರೆ ತಾಲೂಕು ಅಧ್ಯಕ್ಷ ರಾಜಣ್ಣ, ಬುಡ್ನಟ್ಟಿ ತಿಪ್ಪೇಸ್ವಾಮಿ, ಚನ್ನಕೇಶವ ಮೂರ್ತಿ, ವೀರಭದ್ರಪ್ಪ, ಜಯಣ್ಣ, ಬಸವರಾಜ್, ನಿರಂಜನ್ ಮೂರ್ತಿ, ಸಣ್ಣ ತಿಮ್ಮಣ್ಣ, ಜಯಣ್ಣ, ಶಿವಣ್ಣ, ರಂಗಸ್ವಾಮಿ, ಶ್ರೀಕಂಠ ಮೂರ್ತಿ, ಗೋವಿಂದ ರಾಜ್, ನಾಗರಾಜ್, ನಟರಾಜ್, ಹನುಮಂತಪ್ಪ, ಚಿಕ್ಕಣ್ಣ ಮುಂತಾದವರು ಹಾಜರಿದ್ದರು.