ಶರಾವತಿ ಉತ್ಸವ ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರ ವಹಿಸಲಿವೆ. ನಮ್ಮ ಸುತ್ತಮುತ್ತಲಿನ ಕಲೆಗೆ ಗೌರವಿಸುತ್ತಾ, ನಮ್ಮ ನಡುವಿನ ಸಾಧಕರನ್ನು ಸನ್ಮಾನಿಸುವ ಕಾರ್ಯದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆ ಮುಂಚೂಣಿಯಲ್ಲಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲತಾ ಭಟ್ ಹೇಳಿದರು.
ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ ಶರಾವತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.ಮನುಷ್ಯ ಸಂಘಜೀವಿಯಾಗಿದ್ದು, ಅನುವಂಶಿಯವಾಗಿ ಕೆಲವು ಗುಣ ಅಳವಡಿಸಿಕೊಂಡರೂ, ಹೆಚ್ಚಿನ ಗುಣವನ್ನು ಸಮಾಜದಿಂದ ಕಲಿಯುತ್ತಾರೆ. ಇಂತಹ ಸಾಂಸ್ಕ್ರತಿಕ ಕಾರ್ಯಕ್ರಮದಿಂದ ಮನರಂಜನೆ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕಾರ್ಯವಾಗುತ್ತಿದೆ ಎಂದರು.
ಹಿರಿಯ ಸಹಕಾರಿ ಧುರೀಣ ದಿ. ಪಿ.ಎಸ್. ಭಟ್ ಉಪ್ಪೋಣಿ ಸ್ಮಾರಕ ಪ್ರಶಸ್ತಿಯನ್ನು ಸೆಂಟ್ ಮಿಲಗ್ರಿಸ್ ಸೌಹಾರ್ದ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ವಿಷ್ಣು ಆಚಾರಿ ಬಳ್ಕೂರ, ಜನಪದ ರತ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ತುಳಸು ಬೀರು ಗೌಡ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸಿದ ಸೆಂಟ್ ಮಿಲಗ್ರಿಸ್ ಸೌಹಾರ್ದ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮಾತನಾಡಿದರು.
ಸಭಾ ಕಾರ್ಯಕ್ರಮದ ನಂತರ ಮೇಧಾ ಭಟ್ ಒಗ್ಗರೆ ತಂಡದಿಂದ ಭಕ್ತಿ ಸಂಗೀತ, ವಸುಧಾ ಶರ್ಮಾ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.