ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸೋಣ : ಹಳ್ಳೆ

KannadaprabhaNewsNetwork | Published : Sep 20, 2024 1:41 AM

ಸಾರಾಂಶ

Let's remember the sacrifices of the fighters: Halle

-ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ತಹಸೀಲ್ದಾರ್ ಉಮಾಕಾಂತ ಹಳ್ಳೆ

----

ಕನ್ನಡಪ್ರಭ ವಾರ್ತೆ ಶಹಾಪುರ

ಕಲ್ಯಾಣ ಕರ್ನಾಟಕ ಭಾಗದ ವಿಮೋಚನೆಗಾಗಿ ಈ ಭಾಗದ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಅವರ ತ್ಯಾಗದ ಫಲವಾಗಿ ನಾವು ನಿಜಾಮರ ಆಡಳಿತದಿಂದ ಮುಕ್ತರಾಗಿದ್ದೇವೆ ಎಂದು ತಹಸೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು. ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆದ ತಾಲೂಕು ಆಡಳಿತ ಹಾಗೂ ನಗರಸಭೆಯಿಂದ ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಸಂಖ್ಯಾ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಬಭಾಯಿ ಪಟೇಲರ ಸಂಕಲ್ಪ ಶಕ್ತಿಯಿಂದಾಗಿ ಹೈದ್ರಾಬಾದ್ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ನಾವೆಲ್ಲರೂ ಸ್ಮರಿಸಿ ಗೌರವಿಸೋಣ ಎಂದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ್ ಮಾತನಾಡಿ, 1947ರ ಆಗಸ್ಟ್ 15 ರಂದು ಇಡೀ ದೇಶವೇ ಸ್ವಾತಂತ್ರ್ಯದ ಸಂಭ್ರಮ ಆಚರಿ ಸಿತ್ತು. ಆದರೆ, ಹೈದ್ರಾಬಾದ್ ಸಂಸ್ಥಾನವನ್ನು ನಿಜಾಮ ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ನಿರಾಕರಿಸಿದ್ದರಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಭಾಗ್ಯ ಸಿಕ್ಕಿರಲಿಲ್ಲ. ಹೈದ್ರಾಬಾದ್‌ ದೊರೆ ಮೀರ ಉಸ್ಮಾನ್ ಅಲಿಖಾನ್ ತಮ್ಮ ರಾಜ್ಯವನ್ನು ಸ್ವತಂತ್ರವಾಗಿ ಇರಿಸಿಕೊಳ್ಳುವ ಇಚ್ಛೆ ಹೊಂದಿದ್ದ. ಹೀಗಾಗಿ ವಿಮೋಚನಾ ಚಳುವಳಿ ಆರಂಭಗೊಂಡಿತು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಸೇನಾನಿಗಳ ವೇಷ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಜನರ ಕಣ್ಮನ ಸೆಳೆದವು. ನಗರಸಭೆ ಅಧ್ಯಕ್ಷೆ ಮೆಹರುನ್ ಬೇಗಮ್, ನಗರ ಸಭೆಯ ಎಇಇ ನನಸಾಬ್ ಮಡಿವಾಳ, ಸಹಾಯಕ ಖಜಾನೆ ಅಧಿಕಾರಿ ಡಾ. ಎಂ.ಎಸ್. ಶಿರವಾಳ, ಗ್ರೇಡ್-2 ತಹಸೀಲ್ದಾರ್ ಸೇತು ಮಾಧವ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಯೋಗ ಗುರು ಲಕ್ಷ್ಮಣ ಲಾಳಸೇರಿ ನಿರೂಪಿಸಿ, ವಂದಿಸಿದರು.

-----

18ವೈಡಿಆರ್8: ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ತಹಸೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿದರು.

Share this article