ಕನ್ನಡ್ರಭ ವಾರ್ತೆ ಬೆಂಗಳೂರು
ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷಾ ಅಕ್ರಮ ನಡೆಸಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಒಳಗಾಗಿದ್ದ ಪ್ರಕರಣಗಳು ಕಳೆದ ವರ್ಷ ನಡೆದಿದ್ದವು. ವಿದ್ಯಾರ್ಥಿಗಳು ಇಂತಹ ಪ್ರವೃತ್ತಿಗಿಳಿಯಲು ಕಾರಣವೇನು, ಅಂತಹ ಮನೋಭಾವ ತಡೆಯಲು ಏನು ಕ್ರಮ ವಹಿಸಬೇಕೆಂದು ಪರಿಶೀಲಿಸಿ ವರದಿ ಸಲ್ಲಿಸಲು ಸರ್ಕಾರ ಬೆಂಗಳೂರು ವಿವಿ ಕುಲಪತಿ ಡಾ। ಎಸ್.ಎಂ.ಜಯಕರ ಅವರ ನೇತೃತ್ವದ ಸಮಿತಿ ರಚಿಸಿತ್ತು. ಈ ಸಮಿತಿಯು ಗುರುವಾರ ನಡೆದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತನ್ನ ವರದಿ ಸಲ್ಲಿಸಿದ್ದು, ವರದಿಯನ್ನು ವಿಸ್ತೃತವಾಗಿ ಚರ್ಚಿಸಿದ ಬಳಿಕ ಎಸ್‌ಒಪಿ ರೂಪಿಸಲು ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಅವರು, ಪರೀಕ್ಷಾ ಅಕ್ರಮದಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು ಮುಜುಗರದಿಂದ, ಸಮಾಜ, ಪೋಷಕರಿಗೆ ಹೆದರಿ ಹೀಗೆ ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆಯಂತಹ ಪ್ರವೃತ್ತಿಗೆ ಇಳಿಯಬಹುದು. ಹಾಗಾಗಿ ಇಂತಹ ಘಟನೆಗಳು ಮರುಳಿಸದಂತೆ ಯಾವುದೇ ವಿದ್ಯಾರ್ಥಿ ಪರೀಕ್ಷಾ ಅಕ್ರಮದಲ್ಲಿ ಸಿಕ್ಕಿಬಿದ್ದಾಗ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಶಿಕ್ಷಣ ಸಂಸ್ಥೆಗಳಿಗೆ ತಿಳಿಸಲು ಎಸ್‌ಒಪಿ ರೂಪಿಸುವ ಅಗತ್ಯವಿದ್ದು, ಈ ಸಂಬಂಧ ಮನೋವಿಜ್ಞಾನಿಗಳು ಮತ್ತು ಕುಲಪತಿಗಳನ್ನು ಒಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದರು.ಪಿಇಎಸ್ ವಿವಿಯ ವಿದ್ಯಾರ್ಥಿ ಆದಿತ್ಯ ಪ್ರಭು ಆತ್ಮಹತ್ಯೆ ಪ್ರಕರಣದಲ್ಲಿಯೂ ಸಹ, ಘಟನೆಯ ಬಗ್ಗೆ ವಿದ್ಯಾರ್ಥಿಯ ತಾಯಿಗೆ ತಿಳಿಸಿ ಕಾಲೇಜಿಗೆ ಬರುವಂತೆ ಹೇಳಿದ ನಂತರ ವಿದ್ಯಾರ್ಥಿಯ ಕಡೆ ನಿಗಾ ವಹಿಸದೆ ಇರುವುದು ಘಟನೆಗೆ ಕಾರಣವಾಗಿರಬಹುದು. ಇಂತಹ ಪ್ರಕರಣಗಳಲ್ಲಿ ವಿವರವಾದ ತನಿಖೆಗೆ ಮೊದಲು, ಪೋಷಕರಿಗೆ ಮಾಹಿತಿ ನೀಡಬಾರದು ಮತ್ತು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಹೆಚ್ಚಿಸದೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಪರೀಕ್ಷಕರು ತಿಳಿದಿರಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.