ಪ್ರಕೃತಿ, ಸಂಸ್ಕೃತಿ ಉಳಿಸೋಣ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Mar 11, 2026, 02:00 AM IST
ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ನದಿಯ ಹರಿವಿಗೆ ತೊಂದರೆಕೊಟ್ಟರೆ ನಾವು ನದಿಯ ಕುತ್ತಿಗೆ ಹಿಸುಕಿದಂತೆ. ನದಿಗಳು ಸಮುದ್ರ ಸೇರುವ ತನಕ ಯಾವ ಅಡೆತಡೆ ಇಲ್ಲದೆ ಹರಿಯಬೇಕು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ

ಕನ್ನಡಪ್ರಭ ವಾರ್ತೆ ಹೊನ್ನಾವರ

ನದಿಯ ಹರಿವಿಗೆ ತೊಂದರೆಕೊಟ್ಟರೆ ನಾವು ನದಿಯ ಕುತ್ತಿಗೆ ಹಿಸುಕಿದಂತೆ. ನದಿಗಳು ಸಮುದ್ರ ಸೇರುವ ತನಕ ಯಾವ ಅಡೆತಡೆ ಇಲ್ಲದೆ ಹರಿಯಬೇಕು. ನಮಗೆ ದೇವರಿಂದ ಬಳುವಳಿಯಾಗಿ ಬಂದ ಪ್ರಕೃತಿ ಮತ್ತು ಪೂರ್ವಜರಿಂದ ಬಂದ ಸಂಸ್ಕೃತಿ ಉಳಿಸಿಕೊಳ್ಳಬೇಕು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.ತಾಲೂಕಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಯಾರಿಗೂ ತೊಂದರೆ ಆಗದಂತಹ ಯೋಜನೆಗಳು ಬರಲಿ. ಉ.ಕ. ಜಿಲ್ಲೆಯ ಪರಿಸ್ಥಿತಿ ಮಾತ್ರ ವಿಚಿತ್ರವಾಗಿದೆ. ಎಲ್ಲಾ ಯೋಜನೆ ಇಲ್ಲಿಗೆ ಬರುತ್ತದೆ. ಸರಕಾರಕ್ಕೆ ಜನರ ಅಭಿಪ್ರಾಯ ಕೇಳುವ ವ್ಯವಧಾನ ಇಲ್ಲ. ಪರಿಸರ ತಜ್ಞರ ಅಭಿಪ್ರಾಯ ಕೇಳುವುದಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿ ಸಂಘಟನೆ ಭದ್ರವಾಗಿರದೇ ಇರುವುದು ಎಂದರು. ಜಿಲ್ಲೆಯ ಜನ ಇಂತಹ ಯೋಜನೆಯ ವಿರುದ್ಧ ಧ್ವನಿ ಎತ್ತದೆ ಇದ್ದರೆ ಈ ಅವಸ್ಥೆ ಮುಂದುವರಿಯುತ್ತದೆ. ನಮ್ಮಲ್ಲಿ ಒಡಕು ಮೂಡಬಾರದು ಎಂದು ಎಚ್ಚರಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ರಾಜಕಾರಣ ಮಾಡಲು ಬೇರೆ ವೇದಿಕೆ ಇದೆ. ಸ್ವಾಮೀಜಿಗಳನ್ನು ಕೂರಿಸಿಕೊಂಡು ರಾಜಕಾರಣ ಮಾಡುವುದಲ್ಲ. ಶರಾವತಿ ಉಳಿಸಿ ಸಮಿತಿ‌ ಉತ್ತಮ ಕೆಲಸ ಮಾಡಿದೆ. ಪಂಪ್ಡ್‌ ಸ್ಟೋರೇಜ್‌ ಯೋಜನೆಯು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಮಂಜೂರಾಗಿದ್ದು, ಅಂದೇ ಈ ಯೋಜನೆಯನ್ನು ಕ್ಷೇತ್ರದ ಜನರ ಹಿತದೃಷ್ಟಿಯಿಂದ ವಿರೋಧಿಸಿದ್ದೇನೆ. ಅಂದಿನ ಮುಂಗಡಪತ್ರದಲ್ಲಿನ ದಾಖಲೆಗಳ ವಿವರ ಉಲ್ಲೇಖಿಸಿದರು. ರಾಘವೇಶ್ವರ ಶ್ರೀಗಳು ನೀಡುವ ಆದೇಶವನ್ನು ತಾನು ಶಿರಸಾ ವಹಿಸಿ ಪಾಲಿಸುತ್ತೇನೆ. ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಹೋರಾಟ ಸಮಿತಿಯ ಮತ್ತು ಜನರ ಬೆಂಬಲಕ್ಕೆ ತಾನು ನಿಲ್ಲುವುದಾಗಿ ಗುರುಗಳ ಮುಂದೆ ಇಂದೇ ಪ್ರಮಾಣ ಮಾಡುವುದಾಗಿ ಘೋಷಿಸಿದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇದು ಮಾರಕ ಯೋಜನೆ ಎಂದು ವಿಧಾನಸಭೆಯಲ್ಲಿ ಅಭಿಪ್ರಾಯ ಮಂಡಿಸಿದ್ದೇನೆ. ಜನ ಎಚ್ಚರಗೊಂಡರೆ ಈ ಯೋಜನೆ ನಿಲ್ಲಿಸಲು ಸಾಧ್ಯ ಎಂದರು.

ನಂತರ ಡಾ. ಪ್ರಣವಾನಂದ ಸ್ವಾಮೀಜಿ, ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಸುನೀಲ ಬಿ.ನಾಯ್ಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಾಯಿ ಗಾಂವ್ಕರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ಜನತಾದಳ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ ಎಸ್. ನಾಯ್ಕ, ಮಹೇಶ ನಾಯ್ಕ, ಜನತಾದಳ ಬ್ಲಾಕ್‌ ಅಧ್ಯಕ್ಷ ಟಿ.ಟಿ. ನಾಯ್ಕ, ಬಿಜೆಪಿಯ ಮಂಡಲ ಅಧ್ಯಕ್ಷ ಮಂಜುನಾಥ ಎಂ.ನಾಯ್ಕ, ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಟಿ.ಪೈ, ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಕೊಚರೇಕರ, ಕ್ರಾಂತಿರಂಗದ ಅಧ್ಯಕ್ಷ ಮಂಗಲದಾಸ ನಾಯ್ಕ, ಪಟ್ಟಣ ಪಂಚಾಯತಿ ಅಧ್ಯಕ್ಷ ವಿಜಯ ಕಾಮತ, ಮಾಸ್ತಪ್ಪ ನಾಯ್ಕ ಮತ್ತಿತರರಿದ್ದರು.ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಚಂದ್ರಕಾಂತ ಕೊಚರೇಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೇಶವ ನಾಯ್ಕ ಬಳ್ಕೂರ ವಂದಿಸಿದರು.ವಿಶ್ವನಾಥ ನಾಯಕ ನಿರೂಪಿಸಿದರು.

ನಿರ್ಣಯಗಳು1. ಶರಾವತಿ ಕೊಳ್ಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯನ್ನು ಕೂಡಲೇ ಕೈಬಿಡಬೇಕು.

2. ವಿದ್ಯುತ್‌ ಕೊರತೆ ನೀಗಿಸಲು ಬೇರೆ ಸುರಕ್ಷಿತ ಇಂಧನ ಮೂಲಗಳ ಮೊರೆ ಹೋಗಬೇಕು

3. ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೇ ಜಿಲ್ಲೆಯ ಜನರನ್ನು ಅತಂತ್ರರನ್ನಾಗಿಸುವ ಪರಿಸರ ನಾಶಮಾಡುವ ಯಾವುದೇ ಯೋಜನೆಯ ಹೇರಿಕೆ ಮಾಡುವುದನ್ನು ಸರ್ಕಾರಗಳು ಇನ್ನು ಮುಂದಾದರೂ ನಿಲ್ಲಿಸಬೇಕು.

ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

4. ಜಿಲ್ಲೆಯ ಯುವಕರಿಗೆ ಉದ್ಯೋಗ ಕಲ್ಪಿಸುವ ಐಟಿ ಹಬ್‌ಗಳ ಸ್ಥಾಪನೆ, ಜಿಲ್ಲೆಯನ್ನು ಸ್ವಚ್ಛ ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಆಗಬೇಕು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಯ ಸಹಪಾಠಿಗಳ ಮೇಲೆ ದಾಳಿ ಪ್ರಕರಣ: ಬಾಲಕ ಮಾನಸಿಕ ಖಿನ್ನತೆಯೇ ಕಾರಣ?
ಕೆರೆ ತುಂಬಿಸಲು ಅನುದಾನ ನೀಡಿದ್ದು ಕೇಂದ್ರ ಸರ್ಕಾರ