ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಮಹಾತ್ಮಾ ಗಾಂಧೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ನಮ್ಮ ದೇಶದ ಜಾತ್ಯತೀತ ಪರಂಪರೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಮಹಾತ್ಮಾ ಗಾಂಧೀಜಿ. ಗಾಂಧೀಜಿ ಕುರಿತು ಅಪಪ್ರಚಾರ ನಡೆಯುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅವರ ನಡೆ ನುಡಿ, ಆದರ್ಶ, ಮೌಲ್ಯಗಳ ಕುರಿತ ಸತ್ಯ ವಿಚಾರಗಳನ್ನು ಸಮಾಜದಲ್ಲಿ ಪಸರಿಸುವ ಕಾರ್ಯ ನಡೆಯಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಮಹಾತ್ಮಾ ಗಾಂಧೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗಾಂಧೀಜಿ ಕುರಿತು ತಪ್ಪು ಭಾವನೆಗಳನ್ನು ಇಟ್ಟುಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಗಾಂಧೀಜಿ ಇಡೀ ಜಗತ್ತು ಮೆಚ್ಚಿದ, ಒಪ್ಪಿಕೊಂಡ ನಾಯಕ. ಗಾಂಧಿ ಜನ್ಮದಿನವನ್ನು ಜಗತ್ತಿನ ದೇಶಗಳು ಅಹಿಂಸಾ ದಿನವಾಗಿ ಆಚರಿಸುತ್ತಿದ್ದರೆ, ನಮ್ಮ ದೇಶದಲ್ಲಿ ಗಾಂಧಿ ಹತ್ಯೆ ಮಾಡಿದವರನ್ನೇ ವೈಭವೀಕರಿಸುವುದು ನೋವು ತರುವ ವಿಚಾರ. ಗಾಂಧೀಜಿ ಯಾಕೆ ಹುತಾತ್ಮರಾದರು ಎನ್ನುವುದನ್ನು ವಿಮರ್ಶೆ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ರಮಾನಾಥ ರೈ ಹೇಳಿದರು.ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಗಾಂಧೀಜಿ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತ. ಗಾಂಧೀಜಿ ಬಗ್ಗೆ ಇಂದಿನ ಪೀಳಿಗೆಗೆ ಶಾಲೆ ಕಾಲೇಜುಗಳಲ್ಲಿ, ಯುವಕರಿಗೆ ಆದಷ್ಟು ತಿಳಿಹೇಳುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಕೃಪಾ ಆಳ್ವಾ, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲೀಂ, ಪ್ರಕಾಶ್ ಸಾಲಿಯಾನ್, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರಾದ ಬಿ.ಎಂ. ಅಬ್ಬಾಸ್ ಅಲಿ, ಮನೋರಾಜ್ ರಾಜೀವ್, ಲಾರೆನ್ಸ್ ಡಿಸೋಜ, ಸುಹಾನ್ ಆಳ್ವ, ಅಬ್ದುಲ್ ರವೂಫ್, ಕಿರಣ್ ಬುಡ್ಲೆಗುತ್ತು, ನೀರಜ್‌ಪಾಲ್, ಶಬೀರ್ ಎಸ್., ಸುಧೀರ್ ಟಿ ಕೆ, ಪ್ರಕಾಶ್ ಆಳ್ವಿನ್, ತನ್ವಿರ್ ಶಾ, ಗಣೇಶ್ ಪೂಜಾರಿ ಇದ್ದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಶುಭೋದಯ ಆಳ್ವ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.