ಧಾರವಾಡ:
ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ 37ನೇ ಘಟಿಕೋತ್ಸವ ಭಾಷಣ ಮಾಡಿದರು.
ಭಾರತ ಕೆಲವು ಮಸಾಲೆ ಪದಾರ್ಥಗಳ, ಔಷಧೀಯ ಸಸ್ಯಗಳ, ಪ್ರಮುಖ ತೈಲಗಳ ಮತ್ತು ಅಲಂಕಾರಿಕ ಪುಷ್ಪಗಳ ಕೊರತೆ ಅನುಭವಿಸುತ್ತಿದ್ದು ಅವುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ತರಕಾರಿ ಮತ್ತು ಪುಷ್ಪ ಬೀಜಗಳಿಗೂ ಕೂಡಾ ವಿದೇಶಗಳನ್ನು ಅವಲಂಬಿಸಿದೆ. ಬೇಳೆಕಾಳುಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡ ಉತ್ಪಾದಕ ಎನಿಸಿರುವ ಭಾರತ ಅವುಗಳನ್ನು ಕೂಡಾ ಪರದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದೆ. 2050ರಲ್ಲಿ ಭಾರತದ ಜನಸಂಖ್ಯೆ 170 ಕೋಟಿ ತಲುಪುವ ನಿರೀಕ್ಷೆ ಇದ್ದು, ಕೃಷಿ ಉತ್ಪನ್ನಗಳ ಬೇಡಿಕೆಯಲ್ಲಿ ಶೇ.70ರಷ್ಟು ಹೆಚ್ಚಳ ಉಂಟಾಗುವ ಸಂಭವ ಇದೆ ಎಂದರು.ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಬಹುಪ್ರಕಾರಗಳ ಉಪಾಯ ಅಗತ್ಯವಿದೆ. ಸದ್ಯ ಆಮದು ಮಾಡಿಕೊಳ್ಳುತ್ತಿರುವ ಕೃಷಿ ಪದಾರ್ಥಗಳ ಉತ್ಪನ್ನವನ್ನು ದೇಶದಲ್ಲಿಯೇ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸ ತೀವ್ರವಾಗಬೇಕು. ತಂತ್ರಜ್ಞಾನದ ಹೊರತಾಗಿಯೂ ಕೆಲವು ಕ್ರಮಗಳನ್ನು ಜಾರಿಗೊಳಿಸವುದು ಅಗತ್ಯ ಎಂದ ಡಾ. ಸಂಜಯಕುಮಾರ, ಭೂ ವಿಭಜನೆ ತಡೆಯುವುದು, ಕೀಟಗಳ ಬಾಧೆ ನಿವಾರಣೆ, ಹವಾಮಾನ ವೈಪರೀತ್ಯ ನಿರ್ವಹಣೆ, ಜಲ ಮತ್ತು ನೆಲ ನಿರ್ವಹಣೆ ಇವುಗಳ ಬಗ್ಗೆ ಲಕ್ಷ್ಯ ವಹಿಸಬೇಕು ಎಂಬ ಸಲಹೆ ನೀಡಿದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಪದವೀಧರರು ಸರ್ಕಾರಿ ಕೆಲಸ ಬಯಸದೇ ಸ್ವಯಂ ಉದ್ಯೋಗಿಯಾಗಿ ಇತರರಿಗೆ ಉದ್ಯೋಗ ನೀಡಬೇಕು. ಪದವಿ ಪಡೆದ ನಂತರ ಪ್ರಮಾಣ ಪತ್ರ ಹಿಡಿದು ಅಲ್ಲಿಲ್ಲಿ ಕೆಲಸಕ್ಕಾಗಿ ಅಲೆಯುವುದನ್ನು ಬಿಟ್ಟು ನಿಮ್ಮಲ್ಲಿಯ ತಾಂತ್ರಿಕ ಜ್ಞಾನ ಉಪಯೋಗಿಸಿ ಕೃಷಿ ಅಭಿವೃದ್ಧಿಪಡಿಸಲು ಕರೆ ನೀಡಿದರು. ರಾಜ್ಯ ಸರ್ಕಾರ ಸದ್ಯ ಕೃಷಿ ಕ್ಷೇತ್ರದಲ್ಲಿ ತರುತ್ತಿರುವ ಹೊಸ ಬದಲಾವಣೆಗಳನ್ನು ಸಚಿವರು ತಿಳಿಸಿದರು.
ಕೃಷಿ ಪದವಿಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಹಾಗೂ ಪಿಎಚ್.ಡಿ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಿದ ರಾಜ್ಯಪಾಲ ಥಾವರ್‌ಚಂದ ಗೆಹಲೋತ್, ಭಾರತದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಕೃಷಿಗೆ ಒಳಪಡುವ ಸಾಗುವಳಿ ಭೂಮಿ ಪ್ರಮಾಣ ಕಡಿಮೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ಭೂಮಿಯಲ್ಲಿ ಹೆಚ್ಚು ಉತ್ಪಾದನೆ ಮಾಡುವ ಸವಾಲು ರೈತರ ಮುಂದಿದೆ. ಇದಕ್ಕೆ ಪರಿಹಾರವೆಂದರೆ ಜಾಣತನದಿಂದ ಮಣ್ಣು ಹಾಗೂ ನೀರಿನ ನಿರ್ವಹಣೆ ಮಾಡಿ ಸಾಗುವಳಿ ಮಾಡಬೇಕು. ಅತಿಯಾದ ರಾಸಾನಿಯಕನಿಂದ ಈಗಾಗಲೇ ಮಣ್ಣು ಗುಣಮಟ್ಟ ಕಳೆದುಕೊಂಡಿದ್ದು, ಜೈವಿಕ ಸಾಗುವಳಿ ಈ ಸಮಸ್ಯೆಗೆ ಪ್ರಮುಖ ಪರಿಹಾರ. ಈಗಾಗಲೇ ಮಧ್ಯ ಪ್ರದೇಶದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪನ್ನ ತೆಗೆಯುವಲ್ಲಿ ಸಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ದೇಶದ ರೈತರು ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.
ಕೃಷಿ ವಿವಿ 37ನೇ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕ ಪಡೆದ ಹುಬ್ಬಳ್ಳಿ ಮೂಲದ ಶ್ರಿಯಾ ಕರಿ ಕೃಷಿ ಸಂಶೋಧನೆಯಲ್ಲಿ ಸಾಧನೆ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಹರಿಯಾಣಾದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದು, ಕೃಷಿ ಅರ್ಥಶಾಸ್ತ್ರ ಸಂಶೋಧನೆಯಲ್ಲಿ ಕಾರ್ಯ ಮಾಡಿ ರೈತರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುವೆ.