ಹುಬ್ಬಳ್ಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದದ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ಆದರೆ, ನಾವು ಸಮಾಜವಾದವನ್ನು ಕಂಡಿದ್ದು ಜಾರ್ಜ್ ಫರ್ನಾಂಡಿಸ್ ಅವರಲ್ಲಿ. ಈ ಹಿಂದೆ ಜಾರ್ಜ್ ಅವರ ಮೇಲೆ ಶವಪೆಟ್ಟಿಗೆ ಹಗರಣದ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು. ನಂತರ ಅವರ ಮೇಲೆ ತನಿಖೆ ನಡೆದು ಆರೋಪ ಸುಳ್ಳಾದ ಮೇಲೆ ಅವರು ಮತ್ತೆ ಸಚಿವರಾದರು. ಸಿದ್ದರಾಮಯ್ಯ ಕೂಡ ಹಾಗೆ ಮಾಡಲಿ ಎಂದು ಕುಟುಕಿದರು.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಚ್.ಡಿ. ಕುಮಾರಸ್ವಾಮಿ ಮೇಲೆಯೂ ಎಫ್‌ಐಆರ್ ಆಗಿದ್ದು ಅವರು ರಾಜೀನಾಮೆ ನೀಡಲಿ ಎಂಬ ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಬೆಲ್ಲದ, ಇದೊಂದು ಹಗರಣವಲ್ಲ, ಕಾನೂನು ಬದ್ಧ ಪ್ರಕರಣ. ಈ ಚುನಾವಣಾ ಬಾಂಡ್ ವಿರೋಧ ಪಕ್ಷಗಳಿಗೆ ಹೆಚ್ಚಿನ ಲಾಭವಾಗಿದೆ. ಕಾಂಗ್ರೆಸ್ ₹ 28 ಕೋಟಿ, ಜನಸೇನಾ ₹ 21, ಸಮಾಜವಾದಿ ₹ 13 ಕೋಟಿ ತೆಗೆದುಕೊಂಡಿವೆ. ಇದೊಂದು ಚುನಾವಣೆಗೆ ಮಾತ್ರ ಹಣ ತೆಗೆದುಕೊಳ್ಳುವ ಪ್ರಕ್ರಿಯೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.ಹೋರಾಟ ನಿಲ್ಲಲ್ಲ:
ಸಿದ್ದರಾಮಯ್ಯ ಇಂತಹ ಆರೋಪ ಮಾಡುವುದನ್ನು ನಿಲ್ಲಿಸಲಿ. ಅವರ ಮೇಲೆ ಬಂದಿರುವ ಆರೋಪದ ಹಿನ್ನೆಲೆಯಲ್ಲಿ ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಅವರು ರಾಜೀನಾಮೆ ನೀಡಿದಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅವರು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಬೆಲ್ಲದ ಗುಡುಗಿದರು.ನೆನಪಿಸಿಕೊಳ್ಳಲಿ:
2011ರಲ್ಲಿ ಪ್ರತಿಪಕ್ಷದ ನಾಯಕರಿದ್ದಾಗ ಸಿದ್ದರಾಮಯ್ಯ ಏನು ಮಾತನಾಡಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ಇದೇ ಸಿದ್ದರಾಮಯ್ಯ ಅವರು, ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ರಾಜ್ಯಪಾಲರಿದ್ದಾರೆ. ಅವರು ಏನಾದರೂ ಸಲಹೆ ನೀಡಿದರೆ ಅದನ್ನು ಸರ್ಕಾರ ಹಾಗೂ ಮುಖ್ಯಮಂತ್ರಿಗಳಾದವರು ಪಾಲಿಸಬೇಕು ಎಂದಿದ್ದರು. ಈಗ ಮುಡಾ ಹಗರಣ ಕುರಿತು ವಿಚಾರಣೆ ಆಗಬೇಕು ಎಂದು ರಾಜ್ಯಪಾಲರೇ ಸೂಚಿಸಿದ್ದಾರೆ ಎಂದರು.ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಆರೋಪ ಧಿಕ್ಕರಿಸಿ ಹೈಕೋರ್ಟ್‌ಗೆ ಹೋದರು. ಅಲ್ಲೂ ಇವರು ತಪ್ಪು ಮಾಡಿರುವುದಾಗಿ ಆದೇಶ ನೀಡಿತು. ಜನಪ್ರತಿನಿಧಿಗಳ ಕೋರ್ಟ್‌ಗೆ ಹೋದರೂ ಅಲ್ಲೂ ಅವರ ಮೇಲೆ ಪ್ರಕರಣ ದಾಖಲಿಸಲು ಆದೇಶ ನೀಡಿತು. ಈಗ ಈ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದಾರೆ. ಈಗ ಏನು ಮಾಡಬೇಕು ಎಂದುಕೊಂಡ್ಡಿದ್ದೀರಿ ಎಂದು ಪ್ರಶ್ನಿಸಿದರು.