ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ೧೫ನೇ ವರ್ಷದ ಪದವಿ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪದವೀಧರರಾದವರು ಉದ್ಯೋಗ ಗಳಿಸುವುದನ್ನೇ ಗುರಿಯಾಗಿಸಿಕೊಳ್ಳದೆ ಕೌಶಲ್ಯವಂತರಾಗಿ ಹೊರಹೊಮ್ಮಬೇಕು. ಆ ಕೌಶಲ್ಯ ಸಾಧನೆಯ ತರಬೇತಿ ನೀಡುವುದರೊಂದಿಗೆ ಕಂಪನಿ, ಉದ್ದಿಮೆಗಳನ್ನು ತೆರೆದು ಉದ್ಯೋಗ ಸೃಷ್ಟಿ ಮಾಡುವ ಮೂಲಕ ನೀವು ಕಲಿತ ಶಿಕ್ಷಣವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ನಾವು ಗಳಿಸಿದ್ದೇ ಜ್ಞಾನ ಎಂದು ಭಾವಿಸಿದ್ದರೆ ಗ್ರಂಥಾಲಯಗಳೇ ಜ್ಞಾನಿಗಳಾಗಿರುತ್ತಿದ್ದವು. ಜ್ಞಾನ ನಾವು ಗಳಿಸಿದಂತೆ ಬಳಸಿಕೊಂಡಂತೆ ವಿಕಾಸವಾಗುತ್ತಾ ಹೋಗುತ್ತದೆ. ಎಲ್ಲಿ ಜ್ಞಾನವಿರುವುದೋ ಅಲ್ಲಿ ಅಜ್ಞಾನವಿರುವುದಿಲ್ಲ. ಬೆಳಕಿರುವ ಕಡೆ ಕತ್ತಲು ಇರುವುದಿಲ್ಲ. ಸತ್ಯವಿರುವೆಡೆ ಅಸತ್ಯ ಸುಳಿಯುವುದಿಲ್ಲ. ಜ್ಞಾನವಿಲ್ಲದವನು ಪಶುವಿಗೆ ಸಮಾನ ಎಂಬ ಮಾತಿದೆ. ಹಾಗಾಗಿ ಜ್ಞಾನದ ಅಭಿಮುಖವಾಗಿ ಪದವೀಧರರು ಬೆಳವಣಿಗೆ ಸಾಧಿಸಬೇಕು. ದೇಶದ ಸದೃಢ ಬೆಳವಣಿಗೆಗೆ ಎಲ್ಲರೂ ಸಂಕಲ್ಪ ಮಾಡುವಂತೆ ಸಲಹೆ ನೀಡಿದರು.ಎಂಜಿನಿಯರ್‌ಗಳು ಮನಸ್ಸು ಮಾಡಿದರೆ ದೇಶವನ್ನು ನಾಲ್ಕೈದು ವರ್ಷಗಳಲ್ಲಿ ಬದಲಾವಣೆಯನ್ನು ತರಬಹುದು. ರಾಷ್ಟ್ರವನ್ನು ಬಹುಮುಖವಾಗಿ, ಸುಂದರವಾಗಿ ರೂಪಿಸುವ ಶಕ್ತಿ ಎಂಜಿನಿಯರ್‌ಗಳಿಗಿದೆ. ನೀವು ಕಲಿತ ಶಿಕ್ಷಣವನ್ನು ರಾಷ್ಟ್ರದ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುವಂತೆ ಬಳಸುವಂತೆ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯ ಬೆಳವಣಿಗೆ ಸಾಧಿಸಬೇಕಾದರೆ ಕೆ.ವಿ.ಶಂಕರಗೌಡರ ಪಾತ್ರ ಪ್ರಮುಖವಾಗಿದೆ. ಪಿಇಎಸ್ ಎಂಜಿನಿಯರಿಂಗ್ ಕಾಲೇಜು ತೆರೆದು ಗ್ರಾಮೀಣ ಮಕ್ಕಳಿಗೆ ಹೆಚ್ಚು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷ ಣಿಕವಾಗಿ ಅನುಕೂಲವಾಗುವಂತಹ ಎಲ್ಲಾ ಸೌಲಭ್ಯ ಒಳಗೊಂಡಿದೆ. ಶಿಕ್ಷಣಕ್ಕೆ ಪೂರಕವಾದ ವಾತಾವರಣವಿರುವ ಕಾಲೇಜಿನಲ್ಲಿ ಓದಿದವರು ಉನ್ನತ ಹುದ್ದೆಯಲ್ಲಿದ್ದಾರೆ. ಅದೇ ರೀತಿ ಪದವೀಧರರೂ ಉನ್ನತ ಸ್ಥಾನ ಅಲಂಕರಿಸಿ ಕಾಲೇಜಿನ ಕೀರ್ತಿಯನ್ನು ಬೆಳಗಿಸಬೇಕು ಎಂದರು.
ಪದವೀಧರರ ಆಲೋಚನೆಗಳು ದೊಡ್ಡದಾಗಿರಬೇಕು. ವಿಶಾಲವಾದ ದೃಷ್ಟಿಯನ್ನು ಹೊಂದಿದ್ದಾಗ ಮಹತ್ವದ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಪದವಿ ಎನ್ನುವುದನ್ನು ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತವಾಗಿ ಉಳಿಸದೆ ಪದವಿಯೊಂದಿಗೆ ಮುಂದೆ ಏನೆಲ್ಲಾ ಸಾಧನೆ ಮಾಡುವುದಕ್ಕೆ ಅವಕಾಶಗಳಿವೆ ಎಂಬುದನ್ನು ಅರಿತು ಸಾಧನೆಯ ಕಡೆಗೆ ದೃಷ್ಟಿ ಇಡಬೇಕು. ನಿರಂತರ ಪರಿಶ್ರಮ, ಛಲ, ಆತ್ಮವಿಶ್ವಾಸದಿಂದ ಗುರಿಸಾಧನೆ ಮಾಡುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ೧೧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಚಿನ್ನದ ಪದಕ, ಪದವಿ ಪ್ರಮಾಣಪತ್ರ ನೀಡಿದರು.