ಯತೀಂದ್ರಗೆ ಬಾಯಿ ಮುಚ್ಚಿಕೊಂಡಿರುವಂತೆ ಸಿದ್ದು ಬುದ್ಧಿ ಹೇಳಲಿ: ಕೆ.ರಾಜು

KannadaprabhaNewsNetwork |  
Published : Feb 07, 2026, 01:15 AM IST
6ಕೆಆರ್ ಎಂಎನ್ 7.ಜೆಪಿಜಿಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷರು ಆದ ಮಾಜಿ ಶಾಸಕ ಕೆ.ರಾಜು. | Kannada Prabha

ಸಾರಾಂಶ

ರಾಮನಗರ: ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್ ನ ಸೂಪರ್ ಹೈಕಮಾಂಡ್ ನಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಅವರಿಗೆ ಬಾಯಿ ಮುಚ್ಚಿಕೊಂಡಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುದ್ಧಿ ಹೇಳಬೇಕು

ರಾಮನಗರ: ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್ ನ ಸೂಪರ್ ಹೈಕಮಾಂಡ್ ನಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಅವರಿಗೆ ಬಾಯಿ ಮುಚ್ಚಿಕೊಂಡಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುದ್ಧಿ ಹೇಳಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳಿಗೆ ರಾಜ್ಯದ ಮುಖಂಡರು ಮತ್ತು ಕಾರ್ಯಕರ್ತರಿಗೆ ಬುದ್ಧಿ , ಶಿಸ್ತು ಹೇಳಲು ಸಾಧ್ಯವೇ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರು ಆದ ಮಾಜಿ ಶಾಸಕ ಕೆ.ರಾಜು ಕಿಡಿಕಾರಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕೆ.ರಾಜುರವರು, ಯತೀಂದ್ರರವರು ಮುಖ್ಯಮಂತ್ರಿ ಮಗ ಎಂಬ ಪರಿಜ್ಞಾನವಿಲ್ಲದೆ ಪದೇ ಪದೇ ಸಿಎಂ ವಿಷಯವಾಗಿ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಜನರಲ್ಲಿ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಹೈಕಮಾಂಡ್ ಸಿಎಂ ವಿಷಯವಾಗಿ ಸಾರ್ವಜನಿಕವಾಗಿ ಯಾವ ಶಾಸಕರು ಮಾತನಾಡದಂತೆ ಕಟ್ಟಪ್ಪಣೆ ನೀಡಿದ್ದಾರೆ. ಆದರೂ ನಮ್ಮ ತಂದೆಯೇ ಐದು ವರ್ಷ ಸಿಎಂ ಎಂದು ಯತೀಂದ್ರ ಬಾಯಿ ಹರಿಬಿಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಹೈಕಮಾಂಡ್ ಅವರನ್ನು ಕರೆದು ಬುದ್ಧಿಹೇಳುವುದಾಗಲಿ, ಶಿಸ್ತು ಕ್ರಮ ತೆಗೆದು ಕೊಳ್ಳುವುದಾಗಲಿ ಅಥವಾ ನೋಟಿಸ್ ಕೊಡುವುದಾಗಲಿ ಏನನ್ನು ಮಾಡುತ್ತಿಲ್ಲ. ಇದೆಲ್ಲ ನೋಡಿದರೆ ಯತೀಂದ್ರ ಕಾಂಗ್ರೆಸ್ ನ ಸೂಪರ್ ಹೈಕಮಾಂಡ್ ನಂತೆ ಕಾಣುತ್ತಿದ್ದಾರೆ. ಇಂತಹ ಹೇಳಿಕೆ ಗಳಿಂದ ಕಾಂಗ್ರೆಸ್ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರ ಹೆಸರಿಗೆ ಕಪ್ಪುಚುಕ್ಕಿ ಸಹ ತರುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಅವರು ಒಳ್ಳೆಯ ಆಡಳಿತಗಾರರು. ಇಂತಹ ವ್ಯಕ್ತಿತ್ವದವರ ಮಗನಾಗಿರುವ ಯತೀಂದ್ರ ಅವರ ಮಾತು ಗಂಭೀರವಾಗಿರಬೇಕು. ನಾವು ಮಾತನಾಡದಿದ್ದರೆ ಅದು ನಮ್ಮಗಳ ದೌರ್ಬಲ್ಯ ಎಂದು ಕೊಳ್ಳುತ್ತಾರೆ.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಹೋರಾಡಿ ಪಕ್ಷ ಕಟ್ಟಿದ್ದು, ಸಿದ್ದರಾಮಯ್ಯರವರ ಸಹಕಾರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ತಿಳಿದ ಸತ್ಯ. ಅಂದ ಮಾತ್ರಕ್ಕೆ ನಾವು ಮಾತನಾಡದೆ ಸುಮ್ಮನಿದ್ದರೆ ಅದು ಬೇರೆ ಬೇರೆ ಜಾತಿಗಳ ದೌರ್ಬಲ್ಯ ಅಂದುಕೊಳ್ಳುತ್ತಾರೆ. ಇದು ಮುಂದೆ ಕಾಂಗ್ರೆಸ್ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಸಹ ಬೀರುತ್ತದೆ ಎಂದು ತಿಳಿಸಿದ್ದಾರೆ.

ಎಲ್ಲ ವರ್ಗ, ಜಾತಿ ಹಾಗೂ ಧರ್ಮದವರ ಸಹಕಾರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಒಂದೆರೆಡು ಜಾತಿ ವರ್ಗದವರ ಬೆಂಬಲದಿಂದ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರೇ ಅರ್ಥ ಮಾಡಿಸುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ವಿರೋಧ ಪಕ್ಷದವರಿಗೆ ಸಿಂಹಸ್ವಪ್ನವಾಗಿರುವ ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿ ಆಗಬೇಕೆಂಬುದು ಪಕ್ಷದ ಕಾರ್ಯಕರ್ತರು ಆಸೆ. ಕೂಡಲೇ ಹೈಕಮಾಂಡ್ ಕರ್ನಾಟಕದ ಸಿಎಂ ವಿಷಯವಾಗಿ ಸೂಕ್ತ ತೀರ್ಮಾನ ಕೈಗೊಂಡು ಜನರಿಗೆ ಹೌದು ಅಥವಾ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕೆಂದು ಕೆ.ರಾಜು ಒತ್ತಾಯಿಸಿದ್ದಾರೆ.

----------------------------

6ಕೆಆರ್ ಎಂಎನ್ 7.ಜೆಪಿಜಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷರು ಆದ ಮಾಜಿ ಶಾಸಕ ಕೆ.ರಾಜು.

----------------------------

...ಬಾಕ್ಸ್ ...

ಅತಿ ಶೀಘ್ರದಲ್ಲೇ ಡಿಕೆಶಿ ಸಿಎಂ ಆಗುವ ವಿಶ್ವಾಸವಿದೆ -ಇಕ್ಬಾಲ್ ಹುಸೇನ್

ರಾಮನಗರ :

ಅತೀ ಶೀಘ್ರದಲ್ಲೇ ಡಿ.ಕೆ. ಶಿವಕುಮಾರ್ ರವರು ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ. ಇದೇ ಅವಧಿಯಲ್ಲಿ ಆಗಲಿದ್ದಾರೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಏನು ಹೇಳಿದ್ದಾರೊ ನಾನು ನೋಡಿಲ್ಲ. ನೋಡದೆ ನಾನು ಪ್ರತಿಕ್ರಿಯೆ ನೀಡಲ್ಲ. ಈ ಹಿಂದೆ ನಾನು ಎರಡು ಡೇಟ್ ಕೊಟ್ಟಿದ್ದೆ. ಅದು ಫೇಲ್ ಆಗಿತ್ತು. ಮೂರನೇ ಡೇಟ್ ಫೇಲ್ ಆಗುವ ತರಹ ಕೊಡಲ್ಲ. ಶೀಘ್ರದಲ್ಲೇ ಮೂರನೇ ಡೇಟ್ ಕೊಡುತ್ತೇನೆ. ಅದು ಫೇಲ್ ಆಗಲ್ಲ ಎಂದರು.

ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಅಧಿವೇಶನಕ್ಕೂ ಹೋಗಿಲ್ಲ. ಹಾಗಾಗಿ ಯಾವುದೇ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಅವಕಾಶ ಕೊಡಬೇಕು. ಪಕ್ಷದ ಅಧ್ಯಕ್ಷರಾಗಿ ಅವರ ಹೋರಾಟ, ಶ್ರಮದಿಂದ ಕಾಂಗ್ರೆಸ್ ಸರ್ಕಾರ ಬಂದಿದೆ. ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

---------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರ ಶ್ರೀಗಳ ಜ್ಞಾನಮಾರ್ಗ ನಮಗೆ ಆದರ್ಶ
ಮುಂದಿನ ಪೀಳಿಗೆ ಧರ್ಮವಂತರಾಗಿಸೋದೆ ಜೈನ ಧರ್ಮದ ಉದ್ದೇಶ: ಜೈನಮುನಿ ಕುಲರತ್ನಭೂಷಣ ಮಹಾರಾಜರು