ಬಾಹ್ಯಾಕಾಶ ಸಂಶೋಧನೆಗಳು ಜನರ ಜೀವನ ಮಟ್ಟ ಸುಧಾರಿಸಲಿ

KannadaprabhaNewsNetwork |  
Published : Sep 03, 2025, 01:00 AM IST
ಚಿತ್ರದುರ್ಗಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ಚಿತ್ರದುರ್ಗದ ಸಿಕೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದೇಶದಲ್ಲಿ ಅತ್ಯಂತ ಉನ್ನತ ಮಟ್ಟದ ಬಾಹ್ಯಾಕಾಶ ಸಂಶೋಧನೆಗಳು ನಡೆಯುತ್ತಿದ್ದು, ಅವುಗಳು ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅನುಕೂಲಕರವಾಗಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷದ ಡಾ ಎಚ್ ಕೆ ಎಸ್ ಸ್ವಾಮಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ಸಿಕೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಜನರಿಗೆ ಬದುಕು ಕಲ್ಪಿಸುವಂತಹ, ಪರಿಸರದ ಅನಾಹುತಗಳನ್ನು ತಡೆದು ನಿಲ್ಲಿಸುವಂತಹ ಸಂಶೋಧನೆಗಳು ಹೆಚ್ಚಾಗಬೇಕು. ರೈತರಿಗೆ ಮಳೆ ಮಾರುತಗಳ ಬಗ್ಗೆ, ನೆರೆಹಾವಳಿ, ಪ್ರವಾಹವನ್ನು ನಿಯಂತ್ರಿಸುವ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುವ ತುರ್ತು ಅಗತ್ಯವಿದೆ ಎಂದರು.

ಬಾಹ್ಯ ಕಾಶ ಸಂಶೋಧನೆಗಳಿಗೆ ಬಡ ರಾಷ್ಟ್ರಗಳಲ್ಲಿ ಬಂಡವಾಳ ತೊಡಗಿಸುವಷ್ಟು ಅನುಕೂಲ ಇಲ್ಲದಿರುವುದರಿಂದ, ಮುಂದುವರಿದ ರಾಷ್ಟ್ರಗಳನ್ನ ಬೆನ್ನಟ್ಟಬೇಕಾಗಿದೆ. ಬಡ ರಾಷ್ಟ್ರಗಳಲ್ಲಿ ಸಂಶೋಧನೆ ಮಾಡುವ ಆಸ್ಪದಗಳು, ಅವಕಾಶಗಳು ಕಡಿಮೆ ಇರುತ್ತವೆ. ಆದರೂ ಸ್ವಲ್ಪಮಟ್ಟಿಗೆ ವೈಜ್ಞಾನಿಕ ಜ್ಞಾನ, ಜಾಗೃತಿ ಮೂಡಿಸಲು, ಬಾಹ್ಯಾಕಾಶ ಸಂಶೋಧನೆಗಳ ಬಳಕೆ ಮಾಡಿಕೊಳ್ಳಬೇಕಾಗಿದೆ. ಇದು ತಾಂತ್ರಿಕ ಜ್ಞಾನದ ಮುಖಾಂತರ ಜನರ ಜೀವನ ಮಟ್ಟವನ್ನ ಸುಧಾರಿಸಲು ಅನುಕೂಲಕರವಾಗುತ್ತದೆ. ಕೃಷಿ ಪ್ರಧಾನ ದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೋಸ್ಕರ ರೋಗರುಜಿನಗಳ ನಿಯಂತ್ರಣಕ್ಕೊಸ್ಕರ ಬಾಹ್ಯಾಕಾಶ ಸಂಶೋಧನೆಗಳನ್ನ ಬಳಕೆ ಮಾಡಿಕೊಳ್ಳಬಹುದು ಎಂದರು.

ಚಂದ್ರನ ಮೇಲೆ ಮನುಷ್ಯ ಕಾಲಿಟ್ಟ ತಕ್ಷಣ, ನಾವು ಪ್ರಪಂಚದಲ್ಲಿರುವ ಎಲ್ಲಾ ವೈಜ್ಞಾನಿಕ ಸಂಶೋಧನೆಗಳನ್ನ ಉನ್ನತಮಟ್ಟಕೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ಹೆಚ್ಚಿನ ಸಂಶೋಧನೆಗಳಿಗೆ ಕಡಿಮೆ ವೆಚ್ಚದಲ್ಲಿ ರಾಕೆಟ್ ಗಳನ್ನು ಲಾಂಚ್ ಮಾಡುವ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರಗಳು ಮುನ್ನಡೆ ಇಡುತ್ತಿವೆ. ಎಪಿಜೆ ಅಬ್ದುಲ್ ಕಲಾಮ್ ರವರು ರಾಕೆಟ್, ಕ್ಷಿಪಣಿಗಳ ಬಗ್ಗೆ ಸಂಶೋಧನೆ ಮಾಡುತ್ತಾ, ಅದರ ಮುಖಾಂತರ ಜನರ ರೋಗರುಜಿನಗಳಿಗೆ ಬೇಕಾದಂತ ಸಲಕರಣೆಗಳನ್ನು ಉತ್ಪಾದನೆ ಸಾಧ್ಯತೆ ಬಗ್ಗೆ ಆಲೋಚಿಸಿದ್ದರು. ಕಡಿಮೆ ತೂಕದ ವಸ್ತುಗಳನ್ನ ಬಳಕೆ ಮಾಡಿ, ಮಾನವ ಅಂಗಾಂಗಗಳನ್ನು ರೂಪಿಸುವುದು, ರಚನಾತ್ಮಕ ಕಾರ್ಯಕ್ರಮಗಳಲ್ಲಿ ಬಾಹ್ಯ ಕಾಶ ಸಂಶೋಧನೆಯನ್ನು ಬಳಸಿಕೊಳ್ಳುವ ಪ್ರಯತ್ನಗಳಾಗಿದ್ದವು ಎಂದರು.

ಸೆ.7ರಂದು ಚಂದ್ರಗ್ರಹಣವನ್ನು ಜನರು ವೀಕ್ಷಿಸಿ, ಪ್ರಕೃತಿಯಲ್ಲಾಗುವ ವಿಸ್ಮಯಗಳನ್ನ ಆನಂದಿಸಿದ್ದರು. ಪ್ರತಿಯೊಂದರ ಹಿಂದೆಯೂ ಸಹ ನಿಸರ್ಗದ ಕೌಶಲ್ಯ ಉಂಟು. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮನುಷ್ಯ ಪರಿಸರ, ನಿಸರ್ಗದ ನಿಯಮಗಳನ್ನು ಅಳವಡಿಸಿಕೊಂಡು, ಉತ್ತಮ ಜೀವನ ಮಟ್ಟವನ್ನ ಸುಧಾರಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಡಾ.ಎಚ್.ಕೆಎಸ್.ಸ್ವಾಮಿ ಹೇಳಿದರು. ಮುಖ್ಯೋಪಾಧ್ಯಾಯರಾದ ಧನಲಕ್ಷ್ಮಿ, ವನಜಮ್ಮ, ರತ್ನಮ್ಮ, ಸಹ ಶಿಕ್ಷಕರಾದ ಮಂಜುಳಮ್ಮ ಹಾಜರಿದ್ದರು.ವಿದ್ಯಾರ್ಥಿಗಳಿಗೆ ರಾಕೆಟ್ ಮಾದರಿಗಳನ್ನು ತಯಾರಿಸಿ, ರಾಕೆಟ್ ಘೋಷಣೆಗಳನ್ನು ಕೂಗಿ ಜಾಗೃತಿಗೊಳಿಸಲಾಯಿತು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ