ಹೂವಿನಹಡಗಲಿ: ಇಲಾಖೆಯ ಒತ್ತಡದ ಕೆಲಸದ ನಡುವೆಯೂ ಮಕ್ಕಳ ಸ್ನೇಹಿ ಆಗಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕಿದೆ ಎಂದು ಗದಗ ಡಯಟ್ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಶಾಖಾ ಗ್ರಂಥಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, 26ನೇ ವರ್ಷದ ಡಾ.ರಾಧಾ ಕೃಷ್ಣನ್ ಸ್ಮರಣಾರ್ಥ, ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೊಸ ಕಾಲದ ಶಿಕ್ಷಕರ ಸವಾಲುಗಳು ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.ಅರ್ಜಿ, ಶಿಫಾರಸು ನೋಡಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡುವ ವಿಧಾನ ನಿಲ್ಲಬೇಕಿದೆ. ಸೃಜನಶೀಲ ಮಕ್ಕಳ ಪ್ರತಿಭೆ ಅರಳಲು ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ, ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.
ಶಿಕ್ಷಕರು ಪಠ್ಯ ಬೋಧನೆ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕು ಎಂದರು.ಉಪನ್ಯಾಸಕ ಎ.ಕೊಟ್ರಗೌಡ ಮಾತನಾಡಿ, ಬೀಚಿ ಗ್ರಂಥಾಲಯ ಬಳಗ ರಾಜ್ಯದಲ್ಲಿಯೇ ವಿನೂತನ ರೀತಿಯಲ್ಲಿ ಕಾರ್ಯಕ್ರಮ, ಸತತ 26 ವರ್ಷ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಅಶೋಕ ಮಾತನಾಡಿ, ಬಳಗದ ಕೆಲಸಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.ಗೌರವಾಧ್ಯಕ್ಷ ಎಚ್.ಎಂ.ಬೆಟ್ಟಯ್ಯ, ಬೀರಬ್ಬಿ ಬಸವರಾಜ, ಎಂ.ತವನಪ್ಪ, ಎಲ್.ಖಾದರಬಾಷಾ, ಶಾಖಾ ಗ್ರಂಥಾಲಯಾಧಿಕಾರಿ ಮಂಜುನಾಥ ಬೋವಿ, ಪ್ರಾಚಾರ್ಯ ಕೋರಿ ಹಾಲೇಶ್, ಗ್ರಂಥಾಲಯಾಧಿಕಾರಿಗಳಾದ ಮಲ್ಲಪ್ಪ ಗುಡ್ಲಾನೂರು, ನಾರಾಯಣದಾಸ್ ಇತರರು ಉಪಸ್ಥಿತರಿದ್ದರು.
ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಚ್.ಗುರುಪಾದಪ್ಪ, ಎಂ.ಶೇಕ್ ಅಹಮದ್, ಪ್ರದೀಪ್ ಕುಮಾರ್ ಜೋಷಿ ಹಾಗೂ ಮಾಗಳ ಗ್ರಂಥಪಾಲಕ ಬಾಗಳಿ ಸಿದ್ದಪ್ಪ ಇವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.
ಚಿತ್ತಾರ ನೃತ್ಯ ಶಾಲೆಯ ಭೂಮಿಕಾ ಇಟಗಿ ಸ್ವಾಗತ ನೃತ್ಯ ಮಾಡಿದರು. ಶಿಕ್ಷಕರಾದ ಎಂ.ಸಿದ್ದೇಶ್, ಕೆ.ಎ.ಕೆ.ಜಿಲಾನ್, ಕೆ.ದೊಡ್ಡಬಸಪ್ಪ ಪುರಸ್ಕೃತ ಶಿಕ್ಷಕರ ಮಾಹಿತಿ ನೀಡಿದರು.ಉಪನ್ಯಾಸಕ ಶಂಕರ್ ಬೆಟಗೇರಿ, ಶಿಕ್ಷಕ ಹಡಗಲಿ ಬಸವರಾಜ, ಬಳಗದ ಕಾರ್ಯದರ್ಶಿ ನಾಗರಾಜ್ ಮಲ್ಕಿಒಡೆಯರ್ ನಿರ್ವಹಿಸಿದರು.