ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದಂತೆ ಅನುಸೂಚಿತ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೋಷಿತ ವರ್ಗಗಳಿಗೆ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟ ಅನುದಾನ ಬಳಕೆ ಆಗಬೇಕು. ಲೋಪವಾದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಳೆದ 2013ರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾಗಿದೆ. ಸಾಮಾಜಿಕ ಅಸಮಾನತೆ ಎಂಬುದು ಸಮಾಜಕ್ಕೆ ಅಂಟಿದ ಪಿಡುಗಾಗಿದೆ. ಇದನ್ನು ಹೋಗಲಾಡಿಸಲು ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಮಾಡಬೇಕಿದೆ. ಶೋಷಿತ ವರ್ಗದವರ ಅಭಿವೃದ್ಧಿಗೆ ಯಾವ ರೀತಿ ಯೋಜನೆ ನಿರ್ಮಿಸಿ ಅವರನ್ನು ಮೇಲೆತ್ತುವ ಕೆಲಸವನ್ನು ಅಧಿಕಾರಿ ವರ್ಗದವರು ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಮೂಲಕ ಸಮುದಾಯಗಳ ಬಲವರ್ಧನೆಗೆ ಮುಂದಾಗಬೇಕು ಎಂದು ತಿಳಿಸಿದರು.ಸಮಾಜಕ್ಕೆ ಮಾರಕವಾಗಿರುವ ದೇವದಾಸಿ ಪದ್ಧತಿ ನಿರ್ಮೂಲನೆಗೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ದೇವದಾಸಿ ಪುನರ್ವಸತಿ ಯೋಜನೆಯಡಿ 4 ಸಾವಿರ ದೇವದಾಸಿ ಮಹಿಳೆಯರಿಗೆ ಇನ್ನು ಸೂರು ದೊರೆಯದಿರುವ ಮಾಹಿತಿ ತಿಳಿಸಿದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿ ಆದ್ಯತೆ ಮೇರೆಗೆ ಪ್ರತಿಯೊಬ್ಬರಿಗೂ ಇನ್ನು ಎರಡು ತಿಂಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂರು ಕಲ್ಪಸಲು ಕ್ರಮಕೈಗೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ಸರ್ಕಾರದ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮವಹಿಸಲಾಗುವುದೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದರ ಜೊತೆಗೆ ಎರಡು ತಿಂಗಳು ಬಿಟ್ಟು ಜಿಲ್ಲೆಗೆ ಬರುವುದಾಗಿ ತಿಳಿಸಿದರು.
ಪ್ಯಾಕೆಜ್ ಟೆಂಡರ್ ಸಿಸ್ಟಮ್ ಆಗದಂತೆ ನೋಡಿಕೊಳ್ಳಲು ಕೆಬಿಜೆಎನ್ಎಲ್‌ಗೆ ತಿಳಿಸಿದರು. ವಿವಿಧ ಕಾಮಗಾರಿಗಳನ್ನು ಒಂದೇ ಟೆಂಡರ್‌ನಲ್ಲಿ ಕರೆದರೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡಬೇಕಾದ ಟೆಂಡರ್ ಕೈತಪ್ಪಿಹೋಗುತ್ತಿವೆ. ಹಾಗಾಗದಂತೆ ಜಿಲ್ಲಾಡಳಿತ ನಿಗಾವಹಿಸಲು ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗೆ ಸಂಬಂದಿಸಿದ ಕೌಂಪೌಂಡ್, ಆಟದ ಮೈದಾನ, ಬಿಡಿ ಊಟದ ಕೋಣೆ ನಿರ್ಮಾಣ ಮಾಡಲಾಗುತ್ತಿದೆ. ಸ್ವಚ್ಛಭಾರತ ಮಿಷಯ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಹಾಗೂ ಜಾಗ ಇಲ್ಲದವರಿಗೆ ಸಮುದಾಯ ಶೌಚಾಲಯ ನಿರ್ಮಿಸಿಕೊಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸಭೆಗೆ ತಿಳಿಸಿದರು.