ಜಾತಿಗಣತಿ ವರದಿ ವಿರೋಧಿ ಶಾಸಕ ರಾಜಿನಾಮೆ ನೀಡಲಿ

KannadaprabhaNewsNetwork |  
Published : Feb 26, 2025, 01:07 AM IST
25ಕೆಡಿವಿಜಿ1, 2-ದಾವಣಗೆರೆಯಲ್ಲಿ ಮಂಗಳವಾರ ಅಹಿಂದ ಚೇತನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ. ಚಂದ್ರು ದೀಟೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ, ಶೈಕ್ಷಣಿಕ, ಜಾತಿಗಣತಿ ವರದಿ ಬಿಡುಗಡೆಗೆ ವಿರೋಧಿಸಿದ ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ಕ್ಷೇತ್ರದ ಅಹಿಂದ ಮತದಾರರಿಗೆ ದ್ರೋಹ ಬಗೆದಿದ್ದಾರೆ. ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಹಿಂದ ಚೇತನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ ಒತ್ತಾಯಿಸಿದ್ದಾರೆ.

- ಅಹಿಂದ ಚೇತನ ಮುಖಂಡ ರಾಜು ಮೌರ್ಯ ಸವಾಲು । ಅಹಿಂದ ಬಲವಿಲ್ಲದೇ ಚುನಾವಣೆ ಗೆಲ್ಲುವಂತೆ ಸವಾಲು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾಮಾಜಿಕ, ಶೈಕ್ಷಣಿಕ, ಜಾತಿಗಣತಿ ವರದಿ ಬಿಡುಗಡೆಗೆ ವಿರೋಧಿಸಿದ ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ಕ್ಷೇತ್ರದ ಅಹಿಂದ ಮತದಾರರಿಗೆ ದ್ರೋಹ ಬಗೆದಿದ್ದಾರೆ. ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಹಿಂದ ಚೇತನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿಗೆ ವಿರೋಧಿಸಿರುವ ಶಾಸಕ ಬಸವರಾಜ ರಾಜೀನಾಮೆ ಕೊಟ್ಟು, ಅಹಿಂದ ಸಹಕಾರವೇ ಇಲ್ಲದೇ ಚುನಾವಣೆ ಎದುರಿಸಿ, ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಟಿಕೆಟ್ ಪಡೆದು, ಅಹಿಂತ ಮತದಾರರು ಹಾಗೂ ಸಿಎಂ ಸಿದ್ದರಾಮಯ್ಯ ಸಹಕಾರದಿಂದ ಬಸವರಾಜ ಶಿವಗಂಗಾ ಚನ್ನಗಿರಿ ಕ್ಷೇತ್ರ ಶಾಸಕರಾಗಿದ್ದಾರೆ. ಈಗ ಜಾತಿಗಣತಿ ಬಿಡುಗಡೆಗೆ ಅವಕಾಶ ನೀಡೋದಿಲ್ಲ ಎಂಬ ಹೇಳಿಕೆ ನೀಡಿರುವುದು ಖಂಡನೀಯ. 2015ರಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಸರ್ಕಾರ ₹165 ಕೋಟಿ ಬಿಡುಗಡೆ ಮಾಡಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಆಯೋಗದ ಸಹಯೋಗದಲ್ಲಿ ವಿದ್ಯಾವಂತ, ತರಬೇತಿ ಪಡೆದ ಶಿಕ್ಷಕರು ಮನೆ ಮನೆಗೆ ಹೋಗಿ, ಸಮೀಕ್ಷೆ ಕೈಗೊಂಡಿದ್ದನ್ನು ಶಾಸಕರು ಮರೆಯಬಾರದು ಎಂದು ತಾಕೀತು ಮಾಡಿದರು.

ಸಮೀಕ್ಷೆ ವೇಳೆ 55 ಪ್ರಶ್ನೆ ಒಳಗೊಂಡಂತೆ ಒಬ್ಬ ವ್ಯಕ್ತಿಯ, ಒಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ವರದಿ ಸಿದ್ಧವಾಗಿ 10 ವರ್ಷ ಕಳೆದರೂ ವರದಿ ಬಿಡುಗಡೆಗೆ ಸರ್ಕಾರ ಮೀನ-ಮೇಷ ಎಣಿಸುವುದು ಸರಿಯಲ್ಲ. ಆಗಿನ ಕಾಂಗ್ರೆಸ್ ಸರ್ಕಾರ, ನಂತರ ಸಮ್ಮಿಶ್ರ ಸರ್ಕಾರ, ಆನಂತರ ಬಿಜೆಪಿ ಆಗಿ, ಇದೀಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿದ್ದರೂ ಜಾತಿಗಣತಿ ವರದಿ ಬಿಡುಗಡೆಗೆ ವಿಳಂಬ ಅಹಿಂದ ವರ್ಗಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ದೂರಿದರು.

ಎಐಸಿಸಿ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಜಾತಿಗಣತಿಗೆ ಲೋಕಸಭೆಯಲ್ಲಿ, ಚುನಾವಣಾ ಪ್ರಚಾರದಲ್ಲೇ ಒತ್ತಾಯಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜಾತಿಗಣತಿ ವಾಗ್ದಾನ ಮಾಡಿದೆ. ಅಂದು ಪ್ರಣಾಳಿಕೆ ಮುಂದಿಟ್ಟು ಮತ ಕೇಳಿ ಗೆದ್ದಿರುವ ಬಸವರಾಜ. ಜಾತಿ ಗಣತಿ ಅಂಶಕ್ಕೆ ಅಂದೇ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ? ಈಗ 10 ವರ್ಷ ನಂತರ ನಮ್ಮ ಮನೆಗೆ ಯಾರೂ ಬಂದು ಸಮೀಕ್ಷೆ ಮಾಡಿಲ್ಲ, ಎಲ್ಲೋ ಕುಳಿತು, ಸಮೀಕ್ಷೆ ಮಾಡಿದ್ದಾರೆಂಬ ಹೇಳಿಕೆ ನೀಡಿದ್ದಾರೆ. ಇದು ಶಾಸಕನಾಗಿ ಅವರಿಗೆ ಶೋಭೆ ತರುವುದಿಲ್ಲ ಎಂದರು.

ದಾವಣಗೆರೆ ಪಾಲಿಕೆ ಸದಸ್ಯರಾಗಿ, ಸರ್ಕಾರದ ಭಾಗವಾಗಿದ್ದ ಶಿವಗಂಗಾ ಬಸವರಾಜ ತಮ್ಮ ಮನೆಗೆ ಸಮೀಕ್ಷೆಗೆ ಬಂದಿಲ್ಲವೆಂಬ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವಕ್ಕೆ, ಪಕ್ಷಕ್ಕೆ ಮಾಡಿರುವ ಅವಮಾನವಾಗಿದೆ. ಚನ್ನಗಿರಿ ಕ್ಷೇತ್ರದ ಶೇ.80 ಅಹಿಂದ ವರ್ಗಗಳಿಗೆ ಅವಮಾನಿಸಿದ್ದಾರೆ ಎಂದರು.

ಸಂಘಟನೆ ರಾಜ್ಯ ಸಂಘಟನಾ ಸಂಚಾಲಕ ಎಸ್.ಎಂ. ಸಿದ್ದಲಿಂಗಪ್ಪ, ಜಿಲ್ಲಾಧ್ಯಕ್ಷ ಸಿ.ವೀರಣ್ಣ, ಮುಖಂಡರಾದ ಅನಿಲಕುಮಾರ, ಹಸನ್ ಬಾಬು, ಎಲ್.ಅಣ್ಣಪ್ಪ, ಎಸ್.ಹೊಳೆಬಸಪ್ಪ ಇತರರು ಇದ್ದರು.

- - -

ಕೋಟ್‌ ತೆಲಂಗಾಣ ಸರ್ಕಾರ ಒಂದೇ ವರ್ಷದಲ್ಲಿ ಜಾತಿಗಣತಿ ಬಿಡುಗಡೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ. ಈ ವರದಿ ವಿರೋಧಿಸುವ ಶಾಸಕರು, ಸಚಿವರ ಉದ್ಧಟತನದ ಮಾತುಗಳಿಗೆ ಉತ್ತರ ನೀಡುವ ಮೂಲಕ ಅಹಿಂದ ವರ್ಗಗಳಿಗೆ ನ್ಯಾಯ ಒದಗಿಸಬೇಕು

- ರಾಜು ಮೌರ್ಯ, ಮುಖಂಡ

- - - -25ಕೆಡಿವಿಜಿ1, 2:

ದಾವಣಗೆರೆಯಲ್ಲಿ ಮಂಗಳವಾರ ಅಹಿಂದ ಚೇತನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಚಂದ್ರು ದೀಟೂರು, ಇನ್ನಿತರ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ