ರ್ನಾಟಕದಲ್ಲಿ ಸೌಹಾರ್ದಯುತ ಮತ್ತು ಪಾರದರ್ಶಕ ಆಡಳಿತ ನಿರೀಕ್ಷಿಸುತ್ತಿರುವ ಜನತೆಗೆ ಪ್ರಸಕ್ತ ವಿದ್ಯಮಾನ ತೀವ್ರ ಆತಂಕ ಮೂಡಿಸಿವೆ
ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ,ಗಾಂಜಾ ದಂಧೆ, ನಕಲಿ ಗೋರಕ್ಷಕರ ಹಾವಳಿ ಹಾಗೂ ರೌಡಿಸಂ ಮಟ್ಟಹಾಕಿ, ಸಮಾಜಘಾತುಕ ಶಕ್ತಿ ಗಡಿಪಾರು ಮಾಡುವ ಮೂಲಕ ನಾಗರಿಕರು ಮತ್ತು ರೈತರು ನೆಮ್ಮದಿಯಿಂದ ಜೀವಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಮೂಲಕ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ ಖರ್ಗೆಗೆ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಗುರುವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ನಾಗರಿಕರ ಮುಕ್ತ ಜೀವನಕ್ಕೆ ಧಕ್ಕೆಯಾಗುತ್ತಿರುವ ಕೆಲವು ಗಂಭೀರ ವಿದ್ಯಮಾನ ಜರುಗುತ್ತಿವೆ. ಕರ್ನಾಟಕದಲ್ಲಿ ಸೌಹಾರ್ದಯುತ ಮತ್ತು ಪಾರದರ್ಶಕ ಆಡಳಿತ ನಿರೀಕ್ಷಿಸುತ್ತಿರುವ ಜನತೆಗೆ ಪ್ರಸಕ್ತ ವಿದ್ಯಮಾನ ತೀವ್ರ ಆತಂಕ ಮೂಡಿಸಿವೆ. ಕೆಲವು ತಿಂಗಳು ಹಿಂದೆ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಗೋಸಾಗಾಟದ ನೆಪದಲ್ಲಿ ಪೊಲೀಸರ ಸಮ್ಮುಖದಲ್ಲೇ ಮಾರಕಾಸ್ತ್ರ ಪ್ರದರ್ಶಿಸುತ್ತಾ ವಾಹನ ತಡೆದು ದಾಂಧಲೆ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗುಂಪು ಹಲ್ಲೆ ಹಾಗೂ ನೈತಿಕ ಪೊಲೀಸ್ ಗಿರಿ ಘಟನೆ ಇಡೀ ರಾಜ್ಯಕ್ಕೆ ಕೆಟ್ಟ ಮಾದರಿಯಾಗುತ್ತಿವೆ. ಪೊಲೀಸರ ಭಯವಿಲ್ಲದೆ ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ದುಷ್ಕರ್ಮಿ, ವ್ಯವಸ್ಥಿತ ರೌಡಿಗಳಾಗಿ ಪರಿವರ್ತನೆಗೊಂಡು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದಾರೆ. ಇದರೊಂದಿಗೆ ರಾಜ್ಯಾದ್ಯಂತ ಗಾಂಜಾ ಮಾರಾಟ ಮತ್ತು ಸೇವನೆ ಅವ್ಯಾಹತವಾಗಿ ನಡೆಯುತ್ತಿದ್ದು, ಯುವ ಪೀಳಿಗೆ ಹಾದಿ ತಪ್ಪುತ್ತಿದೆ. ಸ್ಥಳೀಯ ಪೊಲೀಸ್ ಸಿಬ್ಬಂದಿಗೆ ಸಂಪೂರ್ಣ ಮಾಹಿತಿ ಇದ್ದಾಗ್ಯೂ ಸ್ಥಳೀಯ ರಾಜಕೀಯ ನಾಯಕರ ಹಸ್ತಕ್ಷೇಪ ಅಥವಾ ಯಾವುದೋ ಕಾರಣಕ್ಕೆ ಇಂತಹ ಪ್ರಕರಣ ಮುಚ್ಚಿಹಾಕಲಾಗುತ್ತಿದೆ. ದೌರ್ಜನ್ಯಕ್ಕೆ ಒಳಗಾದವರು ದೂರು ನೀಡಲು ಮುಂದಾದರೆ ಪೊಲೀಸರೇ ಆರೋಪಿಗಳಿಂದ ಪ್ರತಿ ದೂರು ಕೊಡಿಸಿ ಎರಡೂ ಕಡೆಯವರನ್ನು ಹೆದರಿಸಿ ಪ್ರಕರಣ ಕೈಬಿಡುತ್ತಿರುವ ನಿದರ್ಶನ ಹೆಚ್ಚಾಗುತ್ತಿವೆ. ಕರ್ನಾಟಕವನ್ನು ಕೋಮುವಾದಿ, ಕೊಲೆ ಆರೋಪಿ ಮತ್ತು ರೌಡಿಶೀಟರ್‌ಗಳ ಹಿಡಿತದಿಂದ ಮುಕ್ತಗೊಳಿಸಿ ಜಾತ್ಯಾತೀತ ಹಾಗೂ ನಿಷ್ಪಕ್ಷಪಾತ ಆಡಳಿತ ನೀಡುವ ಮೂಲಕ ನಾಗರಿಕರು ಮತ್ತು ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ ಶೀಲವಂತರ್. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಶಿವಪ್ಪ ಹಡಪದ್ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.