ಹಾವೇರಿ: ಬರಗಾಲ ಇರುವುದರಿಂದ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಪ್ರಸ್ತುತ ವಿವಿಧ ಕುಡಿಯುವ ನೀರಿನ ಮೂಲದಿಂದ ಸರಬರಾಜು ಮಾಡಲಾಗುತ್ತಿರುವ ನೀರು ಸಮರ್ಪಕ ಎನಿಸದಿದ್ದರೆ ಖಾಸಗಿ ಕೊಳವೆಬಾವಿ, ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಟ್ಯಾಂಕರ್ ಬಳಸಬೇಕಾದರೆ ತ್ರಿಸದಸ್ಯ ಕಮಿಟಿ ಪರಿಶೀಲಿಸಿ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ಸೂಚನೆ ನೀಡಿದರು.
ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ದಾಸ್ತಾನು ಕುರಿತಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು, ಬರ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಆಯಾ ತಹಸೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟಾರೆ ₹೧೮.೬೫ ಕೋಟಿ ಅನುದಾನ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳ ನೇತೃತ್ವದ ಸಮಿತಿಯು ತಾಲೂಕು ಮಟ್ಟದಲ್ಲಿ ಬರ ನಿರ್ವಹಣೆಯ ಉಸ್ತುವಾರಿ ಅಧಿಕಾರಿಗಳಾಗಿ ಕಾರ್ಯನಿರ್ವಸುತ್ತಿದ್ದಾರೆ. ಇದರ ಹೊರತಾಗಿಯೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೋಬಳಿವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಆಯಾ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ನೇರವಾಗಿ ಭೇಟಿ ನೀಡಿ, ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವಿನ ದಾಸ್ತಾನು ಕುರಿತಂತೆ ವಾಸ್ತವವಾಗಿ ಪರಿಶೀಲಿಸಿ ಮಾಹಿತಿ ನೀಡಲು ನೇಮಕ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಲಾಗುತ್ತಿದೆ. ಸದ್ಯ ಮೇವಿನ ಯಾವುದೇ ಕೊರತೆ ಇರುವುದಿಲ್ಲ ಎಂದು ವಿವರಿಸಿದರು.ಜನವರಿ ೧ರೊಳಗೆ ವೈದ್ಯಕೀಯ ಕಾಲೇಜ್ ಆಡಳಿತ ವಿಭಾಗ ಹಾಗೂ ವಿದ್ಯಾರ್ಥಿ ನಿಲಯ ಕಟ್ಟಡ ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಜನವರಿ ವೇಳೆಗೆ ಕಂದಾಯ ಗ್ರಾಮಗಳ ಘೋಷಣೆಗೆ ಸಿದ್ಧತೆ ಕೈಗೊಳ್ಳಲಾಗುವುದು. ಕಂದಾಯ ನ್ಯಾಯಾಲಯ ಪ್ರಕರಣಗಳು, ಆರ್‌ಟಿಸಿ ತಿದ್ದುಪಡಿ ಹಾಗೂ ಮ್ಯೂಟೇಷನ್ ಸೇರಿದಂತೆ ವಿವಿಧ ಕಂದಾಯ ಇಲಾಖೆಯ ಪ್ರಗತಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಅಭಿಲೇಖನಾಲಯ ಗಣೀಕರಣಗೊಳಿಸಲು ಸರ್ಕಾರ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಹಾನಗಲ್ ತಹಸೀಲ್ದಾರ್ ಕಚೇರಿಯನ್ನು ಪೈಲೆಟ್ ಯೋಜನೆಗೆ ಆಯ್ಕೆ ಮಾಡಿದೆ. ಗಣೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ, ಇ-ಆಫೀಸ್ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಸಮಾಧಾನ: ಹಿರೇಕೆರೂರು, ರಟ್ಟಿಹಳ್ಳಿ, ಸವಣೂರಿನಲ್ಲಿ ಆರ್‌ಟಿಸಿ ಮ್ಯೂಟೇಷನ್ ಹಾಗೂ ಕಂದಾಯ ಪ್ರಕರಣಗಳ ವಿಲೇವಾರಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಒಂದು ವಾರದೊಳಗಾಗಿ ಬಾಕಿ ಪ್ರಕರಣಗಳ ಇತ್ಯರ್ಥಪಡಿಸಲು ಸವಣೂರು ಹಾಗೂ ಹಾವೇರಿ ಉಪವಿಭಾಗಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ತಾಕೀತು ಮಾಡಿದರು. ಜಿಲ್ಲೆಯ ಎಲ್ಲ ತಾಲೂಕುಗಳ ಬಗರಹುಕುಂ ಸಮಿತಿಗಳನ್ನು ತ್ವರಿತವಾಗಿ ರಚಿಸುವ ನಿಟ್ಟಿನಲ್ಲಿ ಮಾಹಿತಿ ಪಡೆದು ಸರ್ಕಾರಕ್ಕೆ ತ್ವರಿತವಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.