ಜಗತ್ತಿಗೆ ತೆರೆದಿಡುವ ಆತ್ಮಕಥೆ ಆತ್ಮರತಿಯಾಗದಿರಲಿ

KannadaprabhaNewsNetwork |  
Published : Jul 10, 2024, 12:32 AM IST
ತುಮಕೂರು ವಿವಿಯಲ್ಲಿ ನಡೆದ ‘ಯರೆಬೇವು’ ಕುರಿತ ಸಂವಾದ ಕಾರ್ಯಕ್ರಮಕ್ಕೆ ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಚಾಲನೆ ನೀಡಿದರು. | Kannada Prabha

ಸಾರಾಂಶ

ನಮನ್ನು ನಾವು ಜಗತ್ತಿಗೆ ತೆರೆದಿಡುವ ನೈತಿಕ ಕ್ರಮವೇ ಆತ್ಮಕಥೆಯಾಗಿದ್ದರಿಂದ ಆತ್ಮವಿಮರ್ಶೆಯ ಮೂಲಕ ಆತ್ಮಕಥೆಯನ್ನು ರಚಿಸಬೇಕೆ ಹೊರೆತು ಆತ್ಮರತಿಯಾಗಬಾರದು

ಕನ್ನಡಪ್ರಭ ವಾರ್ತೆ ತುಮಕೂರುನಮನ್ನು ನಾವು ಜಗತ್ತಿಗೆ ತೆರೆದಿಡುವ ನೈತಿಕ ಕ್ರಮವೇ ಆತ್ಮಕಥೆಯಾಗಿದ್ದರಿಂದ ಆತ್ಮವಿಮರ್ಶೆಯ ಮೂಲಕ ಆತ್ಮಕಥೆಯನ್ನು ರಚಿಸಬೇಕೆ ಹೊರೆತು ಆತ್ಮರತಿಯಾಗಬಾರದು ಎಂದು ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಹೇಳಿದರು.ತುಮಕೂರು ವಿವಿಯಲ್ಲಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಮಂಗಳವಾರ ಆಯೋಜಿಸಿದ್ದ ಪ್ರೊ.ಎಸ್. ಜಿ. ಸಿದ್ದರಾಮಯ್ಯ ಆತ್ಮಕಥನ ‘ಯರೆಬೇವು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಆತ್ಮಕಥೆಗಳು ಸಮಾಜದ ಏಣಿ ಶ್ರೇಣಿಗಳು, ಅವಮಾನಗಳು, ದುಗುಡ-ದುಮ್ಮಾನಗಳ ಜೊತೆಗೆ ಆ ಕಾಲಘಟ್ಟದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆಗಳ ಕೈಗನ್ನಡಿಯಾಗಿವೆ. ಬಾಳಕಥನ ಎಂಬುದು ರೂಪಕವಿದ್ದಂತೆ, ಪಾರದರ್ಶಕತೆಯಿಂದ ಕೂಡಿದ ಆತ್ಮಕಥೆ ಮಾತ್ರ ಶ್ರೇಷ್ಠವಾದದ್ದು ಎಂದರು.ಹಿರಿಯ ಸಾಹಿತಿಗಳಾದ ಪಿ. ಲಂಕೇಶ್, ಗಿರೀಶ್‌ ಕಾರ್ನಾಡ್, ಶ್ಯಾಮರಾಯರು, ಕುವೆಂಪು, ಶಿವರಾಮ ಕಾರಂತರ ಆತ್ಮಕಥೆಗಳು ನೈಜ ಭಾವವನ್ನು ಹೊಂದಿವೆ. ಬರಹಕ್ಕೆ ವಸ್ತುವಾಗುವಂತೆ ಬದುಕಬೇಕೆಂಬ ಪರಿಕಲ್ಪನೆಯಲ್ಲಿ ಅನೇಕ ಮಹಿಳಾ ಸಾಹಿತಿಗಳ ಉತ್ಕೃಷ್ಟ ಆತ್ಮಕಥಾನಕಗಳು ಬಂದಿವೆ. ಸಾಲು ಮರದ ತಿಮ್ಮಕ್ಕ, ಮಾಟಗಾನಹಟ್ಟಿಯ ದಾಸಪ್ಪನಂತಹ ಅದೆಷ್ಟೋ ಅನಾಮಧೇಯ ಆತ್ಮಕಥೆಗಳನ್ನು ನಾವಿಂದು ಕಟ್ಟಬೇಕಿದೆ ಎಂದರು. ನಮ್ಮ ಪುರಾಣಗಳಲ್ಲಿ ಬರುವ ಮಹಿಳಾ ಪಾತ್ರಗಳಾದ ಸೀತೆ, ಉರ್ಮಿಳಾ, ಶಾಂತ, ಅಂಬೆ, ಅಂಬಿಕೆ, ಅಂಬಾಲಿಕೆ, ಕುಂತಿ, ಭಾನುಮತಿಯರು ಆತ್ಮಕಥನವನ್ನು ಬರೆದಿದ್ದರೆ ಅವರ ತುಡಿತ ಮಿಡಿತಗಳು, ಆ ಕಾಲಘಟ್ಟದ ಸತ್ಯ ಕಥೆಗಳನ್ನು ಬಿಚ್ಚಿಡುತ್ತಿದ್ದವು. ಅದ್ದರಿಂದ ವಿದ್ಯಾರ್ಥಿಗಳು ಆತ್ಮಕತೆಗಳಲ್ಲಿನ ಸೂಕ್ಷ್ಮತೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.‘ಯರೆಬೇವು’ ಆತ್ಮಕಥೆಯು ನನ್ನ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ಕಟ್ಟಿಕೊಡುತ್ತದೆ. ಬಾಲ್ಯದ ಗೆಳೆಯರ ಅನುಭವ, ಗ್ರಾಮೀಣ ಸೊಗಡಿನ ಚಿತ್ರಣಗಳನ್ನು ಕಟ್ಟಿಕೊಡುತ್ತದೆ ಎಂದು ತಿಳಿಸಿದರು.ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಪದವಿಯ ಜೊತೆಗೆ ಸಾಹಿತ್ಯ ಜ್ಞಾನವಿದ್ದಾಗ ಸಮಾಜಮುಖಿ ಕಾರ್ಯಗಳಲ್ಲಿ ಆಸಕ್ತಿ ಬೆಳೆಯುತ್ತದೆ. ಉತ್ತಮ ಆಲೋಚನೆಗಳು, ಚಿಂತನೆಗಳು ಸ್ಫುಟಿಸಬೇಕಾದರೆ ಸುತ್ತಲಿನ ಪರಿಸರ ಸಹಕರಿಸಬೇಕು ಎಂದು ಹೇಳಿದರು. ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜದ ಸಮಸ್ಯೆಗಳ ಕುರಿತು ಬರೆಯಬೇಕೆಂಬ ತುಡಿತವಿರುತ್ತದೆ. ಅವರ ಬರೆಹಗಳನ್ನು ಸರಿಯಾದ ಕ್ರಮದಲ್ಲಿ ಸೇರಿಸಿ, ಸಮಗ್ರವಾಗಿಸುವ ಕಲ್ಪನೆಯನ್ನು ಆತ್ಮಕಥೆಗಳು ನೀಡುತ್ತವೆ ಎಂದರು.ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್‌ ಕೆ.ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4 ತಿಂಗಳ ಕಂದಮ್ಮ ಬೀದಿನಾಯಿ ದಾಳಿಗೆ ಬಲಿ!
6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್‌ ದಾಳಿ