ಪುರಸ್ಕಾರ ಆವಿಷ್ಕಾರಗಳಿಗೆ ನಾಂದಿ ಹಾಡಲಿ

KannadaprabhaNewsNetwork |  
Published : Jun 02, 2026, 03:15 AM IST
ಹುಕ್ಕೇರಿ | Kannada Prabha

ಸಾರಾಂಶ

ವಿದ್ಯಾರ್ಥಿ ಜೀವನ ಎನ್ನುವುದು ಭವಿಷ್ಯದ ಅಡಿಪಾಯ. ಈ ಸಮಯದಲ್ಲಿ ಕಲಿಯುವ ಒಳ್ಳೆಯ ಅಭ್ಯಾಸಗಳು, ಶಿಸ್ತು ಮತ್ತು ಕಠಿಣ ಪರಿಶ್ರಮವೇ ಯಶಸ್ಸಿನ ಮೆಟ್ಟಿಲುಗಳು. ಹಾಗಾಗಿ ವಿದ್ಯಾರ್ಥಿಗಳು ಸತತ ಅಧ್ಯಯನದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಈ ದಿಸೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನೀಡುತ್ತಿರುವ ಪ್ರತಿಭಾ ಪುರಸ್ಕಾರ ಬರುವ ದಿನಗಳಲ್ಲಿ ಆವಿಷ್ಕಾರಗಳಿಗೆ ನಾಂದಿಯಾಗಬೇಕು ಎಂದು ಎಐಜಿ ಫೌಂಡೇಶನ್ ಸಂಸ್ಥಾಪಕ, ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅರವಿಂದ ಘಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ವಿದ್ಯಾರ್ಥಿ ಜೀವನ ಎನ್ನುವುದು ಭವಿಷ್ಯದ ಅಡಿಪಾಯ. ಈ ಸಮಯದಲ್ಲಿ ಕಲಿಯುವ ಒಳ್ಳೆಯ ಅಭ್ಯಾಸಗಳು, ಶಿಸ್ತು ಮತ್ತು ಕಠಿಣ ಪರಿಶ್ರಮವೇ ಯಶಸ್ಸಿನ ಮೆಟ್ಟಿಲುಗಳು. ಹಾಗಾಗಿ ವಿದ್ಯಾರ್ಥಿಗಳು ಸತತ ಅಧ್ಯಯನದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಈ ದಿಸೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನೀಡುತ್ತಿರುವ ಪ್ರತಿಭಾ ಪುರಸ್ಕಾರ ಬರುವ ದಿನಗಳಲ್ಲಿ ಆವಿಷ್ಕಾರಗಳಿಗೆ ನಾಂದಿಯಾಗಬೇಕು ಎಂದು ಎಐಜಿ ಫೌಂಡೇಶನ್ ಸಂಸ್ಥಾಪಕ, ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅರವಿಂದ ಘಟ್ಟಿ ಹೇಳಿದರು.

ಎಐಜಿ ಫೌಂಡೇಶನ್ ಮತ್ತು ಚಲವಾದಿ ಸಮುದಾಯದ ಸಂಯುಕ್ತಾಶ್ರಯದಲ್ಲಿ ಚಿಕ್ಕೋಡಿ ಜೋಡಕುರಳಿ ರಸ್ತೆಯ ಘಟ್ಟಿ ಸಭಾಂಗಣದಲ್ಲಿ ಆಯೋಜಿಸಿದ ಮಹಾನಾಯಕ ಕಲಾವಿದರ ಸಮಾಗಮ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನುಷ್ಯನಲ್ಲಿ ಏನೇ ಕೊರತೆಯಾದರೂ, ಕೃತಜ್ಞತಾಭಾವ ಕಡಿಮೆಯಾಗಬಾರದು. ಸದ್ಗುಣ, ಸತ್ಕಾರ್ಯ ಮಾಡುವ ಗುಣ ರೂಢಿಸಿಕೊಳ್ಳಬೇಕು. ನಿರಂತರ ಪರಿಶ್ರಮದಿಂದ ಮಕ್ಕಳು ಉನ್ನತ ಗುರಿ ತಲುಪಲು ಸಾಧ್ಯವಿದೆ. ಇದರೊಂದಿಗೆ ದೇಶದ ಅತ್ಯುತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಮಯದ ಪಾಲನೆ ಭವಿಷ್ಯವನ್ನು ನಿರ್ಧರಿಸುತ್ತದೆ. ಸೋಲು-ಗೆಲುವು ಜೀವನದ ಸಹಜ ಪ್ರಕ್ರಿಯೆ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ನಿರಂತರವಾಗಿ ಪ್ರಯತ್ನಿಸುವುದೇ ವಿದ್ಯಾರ್ಥಿಯ ನಿಜವಾದ ಲಕ್ಷಣ. ನಗರ ಪ್ರದೇಶದಂತೆ ಗ್ರಾಮೀಣ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಯುಪಿಎಸ್‌ಇ, ಕೆಪಿಎಸ್‌ಇ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.ಮಹಾರಾಷ್ಟ್ರದ ಡಾ.ರಾಜರತ್ನ ಭಂತೇಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಎಷ್ಟೇ ಎತ್ತರಕ್ಕೆ ಬೆಳೆದರೂ, ನಮ್ಮಲ್ಲಿ ವಿನಯತೆ ಮತ್ತು ಮಾನವೀಯತೆ ಇರಬೇಕು. ಸತ್ಸಂಗ ಮತ್ತು ಒಳ್ಳೆಯ ಆಲೋಚನೆ ರೂಢಿಸಿಕೊಳ್ಳಬೇಕು. ಜೀವನದ ಮೌಲ್ಯಗಳು ಮತ್ತು ನೈತಿಕತೆಯ ಕುರಿತು ಅರಿವು ಹೊಂದಬೇಕು. ಜೀವನದಲ್ಲಿ ಸಮಯಕ್ಕೆ ಸಿಗುವ ಬೆಲೆ ಬೇರೆ ಯಾವುದಕ್ಕೂ ಇಲ್ಲ ಎಂದರು.ಮಹಾನಾಯಕ ಧಾರಾವಾಹಿಯ ಕಲಾವಿದ ಅಥರ್ವ ಕರವೆ ಮಾತನಾಡಿ, ಅಂಬೇಡ್ಕರ್‌ ಜೀವನಾಧಾರಿತ ಮಹಾನಾಯಕದಲ್ಲಿ ನಟಿಸುವ ಅವಕಾಶ ಒದಗಿಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಈ ಧಾರಾವಾಹಿಯ ಮೂಲಕ ಅಂಬೇಡ್ಕರರು ಅನುಭವಿಸಿದ ನೋವು, ಅಪಮಾನ ಮತ್ತು ಅವರ ಜೀವನದ ಸಂದೇಶ, ತತ್ವ ಸಿದ್ಧಾಂತಗಳನ್ನು ಪ್ರತಿ ಮನೆ-ಮನಕ್ಕೂ ತಲುಪಿಸಿದ ಆತ್ಮತೃಪ್ತಿ ತಮಗಿದೆ ಎಂದರು.ನಾಗಪೂರ ಧಮ್ಮಮ ಭಂತೇಜಿ, ಜ್ಞಾನಜ್ಯೋತಿ ಭಂತೇಜಿ, ಕೆಎಸ್‌ಆರ್‌ಪಿ ಬೆಳಗಾವಿ ಡಿಐಜಿ ಬಸವರಾಜ ಜಿಲ್ಲೆ, ರಾಜ್ಯಗುಪ್ತಚರ ಇಲಾಖೆಯ ಸಿಪಿಐ ಡಾ.ಎಚ್.ಕೆ. ಭಜಂತ್ರಿ, ಗೃಹರಕ್ಷಕ ದಳ ಜಿಲ್ಲಾ ಉಪಸಮಾದೇಷ್ಟ ಬಾಬಾಸಾಹೇಬ ಕಾಂಬಳೆ, ಅರವಿಂದ ಮೂಲಿಮನಿ, ಎನ್.ವಿ.ಶಿರಗಾಂವಕರ, ಯಮನಪ್ಪ ದೊಡಮನಿ, ಮುಖಂಡರಾದ ಮಹಾವೀರ ಮೋಹಿತೆ, ಸುರೇಶ ತಳವಾರ, ಮಲ್ಲೇಶ ಚೌಗಲೆ, ಬಾಬುರಾವ ಕಾಂಬಳೆ, ಉದಯ ಹುಕ್ಕೇರಿ, ಲಕ್ಷ್ಮಣ ಶಿಪ್ಪೂರೆ, ರಾಜು ವಡ್ಡರ, ಶಾಂತಾರಾಮ ಜೋಗಳೆ, ಶಿವಾನಂದ ಸಂಜೀವಗೋಳ, ರೂಪಾ ಕಾಂಬಳೆ, ಸೋಮಶೇಖರ ಬಣ್ಣದಮನೆ, ಬಿ.ಎಸ್.ಪ್ರಸನ್‌ಕುಮಾರ, ಅಮರಜೀತ ಘಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಮಹಾನಾಯಕ ಧಾರಾವಾಹಿಯ ಕಲಾವಿದರಾದ ಅಂಬೇಡ್ಕರ್‌ ಪಾತ್ರಧಾರಿ ಅಥರ್ವ ಕರವೆ, ರಮಾದೇವಿ ಪಾತ್ರಧಾರಿ ನಯಣಿ ವೇರ್ಣೆ, ಜಿಜಾಬಾಯಿ ಸಕ್ಕಪಾಲ ಪಾತ್ರದಾರಿ ಸ್ನೇಹಾ ಕಾಟೆ, ಖಳನಾಯಕ ಪಾತ್ರದಾರಿ ವಿಕ್ರಮ್ ದ್ವಿವೇದಿ, ಬಾಬಾಸಾಹೇಬ ಅಣ್ಣನ ಪಾತ್ರದಾರಿ ಮಯೂರ್ ಲಾಡ್, ಚಿತ್ರಕಲಾ ನಿರ್ದೇಶಕ ದೇವದಾಸ ಭಂಡಾರೆ ಮತ್ತಿತರ ಕಲಾವಿದರನ್ನು ತೆರೆದ ವಾಹನದಲ್ಲಿ ಸಮಾರಂಭ ಸ್ಥಳದವರೆಗೆ ಭವ್ಯವಾಗಿ ಸ್ವಾಗತಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ತರಗತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಧಕ್ಕೆ ನಿಂತ ಶಾಪಿಂಗ್‌ ಕಾಂಪ್ಲೆಕ್ಸ್ ಕಾಮಗಾರಿ
ಹಿಂದುತ್ವ ಉಳಿಸಲು ಹೆಚ್ಚಿಗೆ ಮಕ್ಕಳ ಹೊಂದಿ