ಹಿಂದುಳಿದ ವರ್ಗಗಳು ಮುಖ್ಯವಾಹಿನಿಗೆ ಬರುವಂತಾಗಲಿ

KannadaprabhaNewsNetwork | Published : Nov 6, 2024 12:51 AM

ಸಾರಾಂಶ

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಮಂಗಳವಾರ ನಗರದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸಲಾಯಿತು

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಮಂಗಳವಾರ ನಗರದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸಲಾಯಿತು.

ಗಾರ್ಡನ್ ರಸ್ತೆಯ ಜಿಲ್ಲಾ ಸವಿತಾ ಸಮಾಜ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಾಲ್ಮೀಕಿ ಹಾಗೂ ನಾರಾಯಣ ಗುರುಗಳ ಭಾವಚಿತ್ರಕ್ಕೆ ಒಕ್ಕೂಟದ ಮುಖಂಡರು ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಿದರು. ಈ ವೇಳೆ ಹಿರಿಯ ಕಲಾವಿದ ಸೈಯದ್ ಅಹಮದ್ ಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಸುಮಾರು 200ಕ್ಕೂ ಹೆಚ್ಚು ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಹೆಸರಾದ ಕಲಾವಿದ ಎಸ್.ಎ.ಖಾನ್ ಅವರ ಕಲಾ ಸೇವೆಯನ್ನು ಶ್ಲಾಘಿಸಿಲಾಯಿತು.

ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗದ ಸಣ್ಣಪುಟ್ಟ ಸಮಾಜದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ದಿ.ದೇವರಾಜ ಅರಸು ಸೇರಿದಂತೆ ಹಲವಾರು ನಾಯಕರು ಶ್ರಮಿಸಿದರು. ಪ್ರಸ್ತುತ ಸಹಕಾರಿ ಸಚಿವ ಕೆ.ಎನ್.ರಾಜಣ್ಣನವರು ಸಾಮಾಜಿಕ ನ್ಯಾಯ ಎತ್ತಿಹಿಡಿಯುವ, ಶೋಷಿತರಿಗೆ ಧ್ವನಿಯಾಗಿ ಸ್ಪಂದಿಸುವ ನಾಯಕರಾಗಿದ್ದಾರೆ. ಈ ನಾಯಕರಿಗೆ ನಾವು ಬೆಂಬಲವಾಗಿ ನಿಲ್ಲಬೇಕು ಎಂದರು.

ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉತ್ತಮ ಸ್ಥಾನಮಾನ ಪಡೆಯಬೇಕು. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ಸರ್ಕಾರ ನಗರದಲ್ಲಿ ಹೆಚ್ಚಿನ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು ಎಂದರು. ನಗರದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ, ಅಂದಿನಿಂದಲೂ ಈ ಸ್ಮಶಾನ ಕಡೆಗಣನೆಗೆ ಒಳಗಾಗಿದೆ. ಬೆಳೆಯುತ್ತಿರುವ ತುಮಕೂರಿನ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನವನ್ನು ವಿಸ್ತಾರಗೊಳಿಸಬೇಕು, ಇಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಸಂಬಂಧಿಸಿದ ಇಲಾಖೆಯನ್ನು ಒತ್ತಾಯಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು, ಎಲ್ಲಾ ಜಾತಿಯವರೂ ಗೌರವಿಸುವಂತಾಗಬೇಕು. ಈ ಕಾರಣಕ್ಕಾಗಿ ಸವಿತಾ ಸಮಾಜದ ಸಭಾಂಗಣದಲ್ಲಿ ವಾಲ್ಮೀಕಿ, ನಾರಾಯಣ ಗುರುಗಳ ಜಯಂತಿ ಆಚರಿಸಿಲಾಗುತ್ತಿದೆ. ಈ ಸಂಪ್ರದಾಯ ಮುಂದುವರೆಯಲಿ ಎಂದು ಆಶಿಸಿದರು.

ಹಿಂದುಳಿದ ವರ್ಗದವರು ಕೇವಲ ಮಹನೀಯರ ಜಯಂತಿ ಮಾಡಿದರೆ ಸಾಲದು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಮಕ್ಕಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ, ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಒಕ್ಕೂಟದ ಉಪಾಧ್ಯಕ್ಷ ಪಿ.ಮೂರ್ತಿ, ಡಿ.ಎಂ.ಸತೀಶ್, ಚಿ.ನಿ.ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ, ಪದಾಧಿಕಾರಿಗಳಾದ ಮಂಜೇಶ್ ಒಲಿಂಪಿಕ್ಸ್, ಶಾಂತಕುಮಾರ್, ಗುರುರಾಘವೇಂದ್ರ, ಮುಖಂಡರಾದ ಮಲ್ಲಸಂದ್ರ ಶಿವಣ್ಣ, ಸೀತಕಲ್ ಕೃಷ್ಣಯ್ಯ, ತೇಜಸ್, ಗರುಡಯ್ಯ, ಡಮರುಗೇಂದ್ರ ಅಟ್ಲಾಸ್ ತೇಜಸ್, ಶಬ್ಬೀರ್ ಅಹ್ಮದ್, ರಾಮಚಂದ್ರರಾವ್ ಮೊದಲಾದವರು ಭಾಗವಹಿಸಿದ್ದರು.

Share this article