ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ವಿರೋಧಿಸಿ ಬಿಜೆಪಿ ಸಂಸದರು ಸಂಸತ್‌ನಲ್ಲಿ ಪ್ರತಿಭಟಿಸಲಿ

KannadaprabhaNewsNetwork | Published : Jul 29, 2024 12:49 AM

ಸಾರಾಂಶ

ಖಾಲಿ ಚೊಂಬುಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಇದನ್ನು ವಿರೋಧಿಸಿ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಪ್ರತಿಭಟಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದ್ದಾರೆ.

ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಶನಿವಾರ ನಗರದ ಲಾಲ್‌ಭಾಗ್‌ನ ಗಾಂಧಿ ಪ್ರತಿಮೆಯ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.ರಾಜ್ಯಕ್ಕೆ ಆದ ಅನ್ಯಾಯವನ್ನು ಖಂಡಿಸಿ ರಾಜ್ಯದ ಸಂಸದರು ಸದನದಿಂದ ಹೊರಗೆ ನಡೆಯಬೇಕು. ರಾಜ್ಯದಲ್ಲಿ 19 ಮಂದಿ ಲೋಕಸಭಾ ಸದಸ್ಯರು, ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ಅನ್ಯಾಯವಾದಾಗ ಮಾತನಾಡಿಲ್ಲ. ಹಾಗಾಗಿ ಅವರು ಸಂಸದರಾಗಿ ಇರಲು ಅರ್ಹರಲ್ಲ. ಜನರ ಬಗ್ಗೆ ಕಳಕಳಿ ಇದ್ದರೆ ಲೋಕಸಭೆಯಲ್ಲಿ ಮಾತನಾಡಬೇಕು. ಪ್ರತಿಭಟನೆ ಮಾಡಬೇಕು ಎಂದು ಐವನ್‌ ಡಿಸೋಜಾ ಹೇಳಿದರು.ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಅವರು ಮಾತನಾಡಿ, ಕೇಂದ್ರದ ಸಚಿವರು ಯಾವುದೇ ಭರವಸೆಗಳನ್ನು ಈಡೇರಿಸುತ್ತಿಲ್ಲ. ಜನರನ್ನು ಮರುಳು ಮಾಡುವುದಕ್ಕಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಎನ್‌ಡಿಎ ಸರ್ಕಾರ ಒಂದು ವರ್ಷ ಮಾತ್ರ ಆಡಳಿತ ನಡೆಸಲಿದೆ. ರಾಜ್ಯದ ಜನರ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದು ಹೇಳಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಬಜೆಟ್‌ನಲ್ಲಿ ರಾಜ್ಯಕ್ಕೆ ನೀರಾವರಿ, ಹೆದ್ದಾರಿ, ರೈಲ್ವೆ, ಮೂಲ ಸೌಕರ್ಯಾಭಿವೃದ್ಧಿ ಸೇರಿದಂತೆ ಯಾವುದೂ ಕೂಡ ಸಿಕ್ಕಿಲ್ಲ. ಮೋದಿ ಸರ್ಕಾರದಲ್ಲಿ ಹೆಚ್ಚಿನ ಸಚಿವರುಗಳಿಗೆ ಯಾವುದೇ ಧ್ವನಿ ಇಲ್ಲ. ಅಂಥವರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ ಎಂದು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್‌, ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ಸುರೇಶ್‌ ಬಳ್ಳಾಲ್‌ ಮೊದಲಾದವರು ಪಾಲ್ಗೊಂಡಿದ್ದರು.

ಖಾಲಿ ಚೊಂಬುಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಪ್ರತಿಭಟಿಸಿದರು.

Share this article