ಕೇಂದ್ರ ಸರ್ಕಾರ ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲಿ

KannadaprabhaNewsNetwork |  
Published : Jan 19, 2024, 01:52 AM IST
18ಕೆಎಂಎನ್ ಡಿ35ಮಂಡ್ಯದಲ್ಲಿ ಲಾರಿ ಮಾಲೀಕರು ಮತ್ತು ಚಾಲಕರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. | Kannada Prabha

ಸಾರಾಂಶ

ಭಾರತೀಯ ನ್ಯಾಯಸಂಹಿತೆಯ ಕಲಂ 106 ರ ಉಪವಿಧಿ 1 ಮತ್ತು 2 ತಿದ್ದುಪಡಿಯು ಚಾಲಕರಿಗೆ ಮಾರಕವಾಗಿದೆ. ಕಾಯ್ದೆ ಕಠಿಣವಾಗಿ ಪಾಲನೆ ಆದರೆ, ಸರಕು ಸಾಗಾಟ ವಾಹನ ಚಾಲನೆಗೆ ಯಾರು ಸಹ ಮುಂದೆ ಬರದ ಸ್ಥಿತಿ ನಿರ್ಮಾಣವಾಗಲಿದೆ.

ಲಾರಿ ಮಾಲೀಕರು,ಚಾಲಕರಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ । ಲಾರಿ ಮಾಲೀಕರು, ಮಿನಿ ಸರಕು ಸಾಗಾಣಿಕೆ ಮಾಲೀಕರು, ಚಾಲಕರು ಭಾಗಿ

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸರ್ಕಾರ ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ

ಆಗ್ರಹಿಸಿ ಲಾರಿ ಮಾಲೀಕರು ಮತ್ತು ಚಾಲಕರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಮೈಷುಗರ್ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿದ ಜಿಲ್ಲಾ ಲಾರಿ ಮಾಲೀಕರ ಸಂಘ, ರೈಲ್ವೆ ಗೂಡ್ ಶೆಡ್ ಲಾರಿ ಹಾಗೂ ಸ್ಥಳೀಯ ಲಾರಿ ಮಾಲೀಕರ ಸಂಘ ಹಾಗೂ ಮಂಡ್ಯ ನಗರ ಮಿನಿ ಸರಕು ಸಾಗಾಣಿಕೆ ಮಾಲೀಕರು ಮತ್ತು ಚಾಲಕರ ಸಂಘದವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಭಾರತೀಯ ನ್ಯಾಯಸಂಹಿತೆಯ ಕಲಂ 106 ರ ಉಪವಿಧಿ 1 ಮತ್ತು 2 ತಿದ್ದುಪಡಿಯು ಚಾಲಕರಿಗೆ ಮಾರಕವಾಗಿದೆ. ಕಾಯ್ದೆ ಕಠಿಣವಾಗಿ ಪಾಲನೆ ಆದರೆ, ಸರಕು ಸಾಗಾಟ ವಾಹನ ಚಾಲನೆಗೆ ಯಾರು ಸಹ ಮುಂದೆ ಬರದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರೂ ಅಪಘಾತವನ್ನು ಬೇಕಂತಲೇ ಮಾಡುವುದಿಲ್ಲ. ಸಣ್ಣ ವಾಹನಗಳು ಬಂದು ಲಾರಿಗೆ ಡಿಕ್ಕಿ ಹೊಡೆದರೂ ಲಾರಿ ಚಾಲಕನ ಮೇಲೆಯೇ ಪ್ರಕರಣ ದಾಖಲಾಗುತ್ತದೆ. ಈ ತಿದ್ದುಪಡಿಯ ಪ್ರಕಾರ ಅಪಘಾತ ನಡೆದ ಕೂಡಲೇ ಚಾಲಕನನ್ನು ಬಂಧಿಸಬೇಕು ಎಂಬ ನಿಯಮ ರೂಪಿಸಿದ್ದು, ಅದೇ ರೀತಿ 10 ವರ್ಷ ಜೈಲು ಶಿಕ್ಷೆ 7 ಲಕ್ಷ ದಂಡ ವಿಧಿಸಲು ಅವಕಾಶ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ಕಾನೂನಿನಿಂದ ವಾಹನ ಉದ್ಯಮ ಹಲವು ಕಠಿಣ ನಿಯಮಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಕಾಯ್ದೆಯಿಂದ ವಾಹನ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಈ ಕಾಯ್ದೆ ಜಾರಿಗೆ ಬಂದರೆ ಚಾಲಕರು ಕರ್ತವ್ಯ ನಿರ್ವಹಣೆ ವೇಳೆ ಅಪಘಾತವಾದರೆ ಕಾನೂನು ತೊಡಕು ಎದುರಿಸಲು ಸಾಧ್ಯವಾಗದೆ ವೃತ್ತಿ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ಕೂಡಲೇ ಕಾಯ್ದೆಯನ್ನು ಪರಿಶೀಲಿಸಿ ಯಾವುದೇ ಕಾರಣಕ್ಕೂ ನೂತನ ಕಾಯ್ದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ರಾಜ್ಯದ ಗಡಿ ಭಾಗದಲ್ಲಿ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದು ಹಾಕಬೇಕು. ಹೆಚ್ಚುವರಿ ಲೋಡ್‌ಗೆ ವಿಧಿಸುತ್ತಿರುವ ದಂಡವನ್ನು ಕಡಿಮೆ ಮಾಡಬೇಕು. ಕಪ್ಪುಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಸಾಮರ್ಥ್ಯ ಪ್ರಮಾಣಪತ್ರ ಪರವಾನಗಿ ನವೀಕರಣ ನಿರಾಕರಿಸಬಾರದು, ಬೆಂಗಳೂರು ನಗರದ ಪ್ರವೇಶಕ್ಕೆ ಸರಕು ಸಾಗಾಟದ ವಾಹನಗಳಿಗೆ ದಿನದ ಕೆಲವು ಸಮಯದಲ್ಲಿ ನಿರ್ಬಂಧ ವಿಧಿಸಿ ರುವುದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಎಂ.ಎಸ್.ಸತ್ಯಾನಂದ, ಎಚ್.ಮಹೇಶ್, ಎಚ್.ಎಸ್. ಸಂಜಯ್ ಕುಮಾರ್, ಧನ್ಯಕುಮಾರ್, ಯೋಗೇಶ್ ಸೇರಿದಂತೆ ಲಾರಿ ಮಾಲೀಕರು, ಚಾಲಕರು ಭಾಗವಹಿಸಿದ್ದರು.

------------

18ಕೆಎಂಎನ್ ಡಿ35

ಮಂಡ್ಯದಲ್ಲಿ ಲಾರಿ ಮಾಲೀಕರು ಮತ್ತು ಚಾಲಕರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ