ಎನ್. ನಾಗೇಂದ್ರಸ್ವಾಮಿ ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಪ್ರಧಾನಿ ಮೋದಿ ಮೆಚ್ಚಿದ್ದ ಜೋಗುಳ ಪದ ರಚಿಸಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಕವಿ ಮಂಜುನಾಥ್ ಅವರಿಗೆ ಜ.26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.
ಮಂಜುನಾಥ್ ಅವರು ವೖತ್ತಿಯಲ್ಲಿ ಎಲ್ಐಸಿ ವಿಮಾ ಪಾಲಿಸಿದಾರರಾಗಿ ಪ್ರವೃತ್ತಿಯಲ್ಲಿ ಕವಿಯಾಗಿ ಗುರುತಿಸಿಕೊಂಡಿದ್ದವರು. ಅವರು ಕೋವಿಡ್ ವೇಳೆ ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ.. ಎಂಬ ಸಾಲಿನಿಂದ ಕೂಡಿದ ಜೋಗುಳ ಪದ ರಚಿಸಿದ್ದರು. ಕೇಂದ್ರ ಸರ್ಕಾರ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆನ್ ಲೈನ್ ರಂಗೋಲಿ, ದೇಶಭಕ್ತಿ ಗೀತೆ, ಲಾಲಿಹಾಡು ಸ್ಪರ್ಧೆಗಳನ್ನು ಯೋಜಿಸಲಾಗಿತ್ತು. ಇದನ್ನು ಮನಗಂಡ ಮಂಜುನಾಥ್ ಅವರು ತಮ್ಮ ಪುತ್ರನ ಒತ್ತಾಸೆಗೆ ಮಣಿದು ಜೋಗುಳದ ಹಾಡು ರಚಿಸಿ ಕಳುಹಿಸಿದ್ದರು. ಆರು ನೂರಕ್ಕೂ ಅಧಿಕ ಜಿಲ್ಲೆಗಳಿಂದ ಯುವ ಕವಿಗಳು, ಬರಹಗಾರರು ತಮ್ಮ ಕವನ ಕಳುಹಿಸುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. ಆದರೆ ಮಂಜುನಾಥ್ ಅವರ ಜೋಗುಳದ ಹಾಡು ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವ ಮೂಲಕ ಪ್ರಧಾನಿ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿತ್ತು. 6 ಲಕ್ಷ ನಗದು ಬಹುಮಾನದ ಮನ್ನಣೆಯೂ ದೊರೆತಿತ್ತು. ಇದರ ಕುರಿತು ಸ್ವತಃ ಪ್ರಧಾನಿ ಮೋದಿಯವರೇ ಕನ್ನಡದ ಕವಿ ಬರೆದಿರುವ ಲೋರಿ ಹಾಡು (ಲಾಲಿ ಹಾಡು) ನನ್ನ ಗಮನ ಸೆಳೆದಿದೆ. ನಾನು ಸಹಾ ಈ ಹಾಡು ಕೇಳಿದ್ದೇನೆ, ನೀವು ಕೇಳಿ ಎಂದು ಪ್ರಸ್ತಾಪಿಸಿದ್ದ ವೇಳೆ ಈ ರಚನೆಗೆ ಮನ್ ಕಿ ಬಾತ್ ನಲ್ಲಿ ಯುವ ಹಾಡುಗಾರರು ಧ್ವನಿ ನೀಡಿ ಗಮನ ಸೆಳೆದಿದ್ದರು. ಈ ಹಿನ್ನೆಲೆ ಪ್ರಧಾನಿಗಳ ಮನ ಮೆಚ್ಚಿದ್ದ ಜೋಗುಳದ ಹಾಡಿನ ರಚನೆಕಾರ ಕವಿ ಮಂಜುನಾಥ್ ಅವರಿಗೆ 26 ರಂದು ದೆಹಲಿಯಲ್ಲಿ ವಿಜೃಂಭಣೆಯಿಂದ ಜರುಗುವ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರ ಆಹ್ವಾನ ನೀಡಿದ್ದು 24 ರಂದು ವಿಮಾನದಲ್ಲಿ ದಂಪತಿ ಸಮೇತ ಆಗಮಿಸುವಂತೆ ಟಿಕೆಟ್ ಸಹ ಕೇಂದ್ರವೇ ಬುಕ್ ಮಾಡಿದೆ. ಈ ಹಿನ್ನೆಲೆ 24 ರಂದು ಬೆಳಗ್ಗೆ ಬೆಂಗಳೂರು ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣ ಕ್ರಮಿಸಿ ದೆಹಲಿ ತೆರಳಲಿದ್ದಾರೆ. ಪುನಃ 29ರಂದು ಮಂಜುನಾಥ್ ದಂಪತಿಗಳು ಹಿಂತಿರುಗಲಿದ್ದಾರೆ.75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ನಾನು ಕೇಂದ್ರ ಸರ್ಕಾರ ಆಯೋಜಿಸಿದ್ದ ಲೋರಿ ಹಾಡು (ಲಾಲಿ ಹಾಡು) ಸ್ಪರ್ಧೆಯಲ್ಲಿ ನನ್ನ ಪುತ್ರನ ಒತ್ತಾಸೆಗೆ ಮಣಿದು ರಚಿಸಿದ್ದೆ. ನನ್ನ ಪುತ್ರನೆ ಅದನ್ನು ಆನ್ ಲೈನ್ ಮೂಲಕ ಕಳುಹಿಸಿದ್ದ. ನನ್ನ ರಚನೆಯ ಲಾಲಿ ಹಾಡಿಗೆ 6 ಲಕ್ಷ ಕೇಂದ್ರದಿಂದ ನಗದು ಬಹುಮಾನ ಬಂದಿರುವುದು ಕೇಳಿ ಅಚ್ಚರಿ ಜೊತೆ ಸಂತಸವೂ ಆಗಿತ್ತು. ಅದಾದ ಕೆಲವು ದಿನಗಳ ಬಳಿಕ ಪ್ರಧಾನಿಗಳೇ ಮನ್ ಕಿ ಬಾತ್ ನಲ್ಲಿ ನಮ್ಮ ಚಾ.ನಗರ ಜಿಲ್ಲೆಯ ಕವಿ ಮಂಜುನಾಥ್ ಅವರ ಲಾಲಿ ಹಾಡು ಚೆನ್ನಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದು ಕೇಳಿ ಪುಳಕಿತಗೊಂಡಿದ್ದೆ. ಈಗ ಕೇಂದ್ರ ಸರ್ಕಾರವೇ ನನಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದೆ. ಈ ಹಿನ್ನೆಲೆ ಪತ್ನಿ ಸಮೇತ 24ರಂದು ಬೆಳಗ್ಗೆ ತೆರಳಿ, 29ರಂದು ವಾಪಸಾಗುತ್ತೇನೆ. ಕೇಂದ್ರ ಸರ್ಕಾರವೇ ನನಗೆ ಆಹ್ವಾನ ನೀಡಿ ವಿಮಾನದ ಟಿಕೆಟ್ ಬುಕ್ ಮಾಡಿದ್ದು, ಈ ಪ್ರೀತಿ ಪೂರ್ವಕ ಕರೆ ನನಗೆ ಸಂತಸವನ್ನು ಉಂಟುಮಾಡಿದೆ.ಬಾಳಗುಣಸೆ ಮಂಜುನಾಥ್, ಕವಿ, ಬರಹಗಾರ