ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ನಗರಸಭೆ ಗಮನಹರಿಸಲಿ

KannadaprabhaNewsNetwork | Published : Jan 18, 2024 2:08 AM

ಸಾರಾಂಶ

ವಿಕಲಚೇತನರ ಬಗ್ಗೆ ಕಾಳಜಿ ವಹಿಸಿ 100ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ರೇಷನ್ ಕಿಟ್, ವೀಲ್‌ಚೇರ್, ವಾಕರ್ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು ಕಂಪ್ಯಾಷನ್ ಇಂಡಿಯಾ ಟ್ರಸ್ಟ್ ಮತ್ತು ಆಪರೇಷನ್ ಇಕ್ವಿಪ್ ಇಂಡಿಯಾ ಸಂಸ್ಥೆ ಸ್ವಯಂಪ್ರೇರಿತವಾಗಿ ನೀಡುತ್ತಿರುವ ಕಾರ್ಯ ಅನುಕರಣೀಯವಾಗಿದೆ. ನಗರಸಭೆ ವತಿಯಿಂದ ಸಹ ವಿಕಲಚೇತನರಿಗೆ ವಿವಿಧ ಸೌಲಭ್ಯ ಕಲ್ಪಿಸುವತ್ತ ಪೌರಾಯುಕ್ತರು ತಕ್ಷಣ ಗಮನಹರಿಸಬೇಕು ಎಂದು ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ಸಾಗರ

ವಿಕಲಚೇತನರ ಬಗ್ಗೆ ಕಾಳಜಿ ವಹಿಸಿ 100ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ರೇಷನ್ ಕಿಟ್, ವೀಲ್‌ಚೇರ್, ವಾಕರ್ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು ಸ್ವಯಂಪ್ರೇರಿತವಾಗಿ ನೀಡುತ್ತಿರುವ ಕಾರ್ಯ ಅನುಕರಣೀಯವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ನಗರಸಭೆ ರಂಗಮಂದಿರದಲ್ಲಿ ಮಂಗಳವಾರ ಕಂಪ್ಯಾಷನ್ ಇಂಡಿಯಾ ಟ್ರಸ್ಟ್ ಮತ್ತು ಆಪರೇಷನ್ ಇಕ್ವಿಪ್ ಇಂಡಿಯಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷಚೇತನ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದರು.

ಇಂತಹ ಜನಪರ ಸೇವೆಯ ಸಂಸ್ಥೆಗಳಿಗೆ ಎಲ್ಲ ರೀತಿಯ ಸಹಕಾರ ಕೊಡಲಾಗುತ್ತದೆ. ನಗರಸಭೆ ವತಿಯಿಂದ ವಿಕಲಚೇತನರಿಗೆ ವಿವಿಧ ಸೌಲಭ್ಯ ಕಲ್ಪಿಸುವತ್ತ ಪೌರಾಯುಕ್ತರು ತಕ್ಷಣ ಗಮನಹರಿಸಬೇಕು ಎಂದು ಸೂಚನೆ ನೀಡಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ನಮ್ಮ ನಡುವೆ ಇರುವ ವಿಕಲಚೇತನರ ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಕಂಪ್ಯಾಷನ್ ಇಂಡಿಯಾ ಟ್ರಸ್ಟ್ ಮಾಡುತ್ತಿದೆ. ಸಂಕಷ್ಟದಲ್ಲಿದ್ದವರ ಕಣ್ಣೀರು ಒರೆಸುವುದು ಅತ್ಯಂತ ಪುಣ್ಯದ ಕೆಲಸ. ವಿಕಲಚೇತನರನ್ನು ನೋಡಿಕೊಳ್ಳುವುದು ಸವಾಲಿನದು. ಇಂತಹ ಸಂಸ್ಥೆಗಳಿಗೆ ನಗರಸಭೆ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.

ಟ್ರಸ್ಟ್ ಕಾರ್ಯದರ್ಶಿ ವಿಲ್ಸನ್ ಗೋಮ್ಸ್ ಮಾತನಾಡಿ, ಟ್ರಸ್ಟ್ ವತಿಯಿಂದ ಅನೇಕ ಸಾಮಾಜಿಕ ಕೆಲಸಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಈ ದಿನ ೧೦೦ಕ್ಕೂ ಹೆಚ್ಚು ಕುಟುಂಬಗಳಿಗೆ ರೇಷನ್ ಕಿಟ್, ವೀಲ್ಹ್ಚೇರ್, ವಾಕರ್, ಊರುಗೋಲು, ಕೇನ್ ನೀಡಲಾಗಿದೆ. ಜೊತೆಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ. ವಿಶೇಷವಾಗಿ ನಮ್ಮ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಅನೇಕ ಕಾರ್ಯಕ್ರಮ ನಡೆಸಿದ್ದು, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ರಾಬರ್ಟ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು. ಧಮೇಂದ್ರ ಶಿರವಾಳ, ಶ್ಯಾಮಸುಂದರ ಕೆ.ಎನ್., ಫ್ರಾನ್ಸಿಸ್ ಮಿರಾಂಡ, ಜಾನ್ ಲೋಪಿಸ್, ಡಾ.ಜಿಮ್, ಜೋಸೆಫ್ ರೋಡ್ರಿಗಸ್, ಜಾನ್ ಡಿಸೋಜ, ಅರ್ಥರ್ ಗೋಮ್ಸ್ ಇನ್ನಿತರರು ಹಾಜರಿದ್ದರು.೧೬ಕೆ.ಎಸ್.ಎ.ಜಿ.೩

ಕಂಪ್ಯಾಷನ್ ಇಂಡಿಯಾ ಟ್ರಸ್ಟ್ ಮತ್ತು ಆಪರೇಷನ್ ಇಕ್ವಿಪ್ ಇಂಡಿಯಾ ಸಂಸ್ಥೆ ಹಮ್ಮಿಕೊಂಡಿದ್ದ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.

Share this article