ಆಡಳಿತ ಮಂಡಳಿಗೆ ಪೂರ್ಣಾವಧಿ ಕೆಲಸ ಮಾಡಲು ಬಿಡಿ: ಲೋಕೇಶ ಹೆಗಡೆ

KannadaprabhaNewsNetwork |  
Published : Jun 22, 2024, 12:51 AM IST
ಸುದ್ದಿಗೋಷ್ಠಿ ನಡೆಸಿದರು  | Kannada Prabha

ಸಾರಾಂಶ

ಸಂಸ್ಥೆಯ ದೈನಂದಿನ ವ್ಯವಹಾರಗಳು ಕೋರ್ಟು ಕಚೇರಿಯಲ್ಲಿ ನಡೆಯುವುದಕ್ಕಿಂತ ಸಂಘದಲ್ಲೇ ನಡೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಲೋಕೇಶ ಹೆಗಡೆ ತಿಳಿಸಿದರು.

ಶಿರಸಿ: ಟಿಎಸ್‌ಎಸ್ ಹಾಲಿ ಆಡಳಿತ ಮಂಡಳಿಗೆ ಚುನಾವಣೆಯಲ್ಲಿ ಮತ ಹಾಕುವ ಮೂಲಕ ಸಾಮಾನ್ಯ ಷೇರು ಸದಸ್ಯರಾದ ನಾವು ಆಡಳಿತಕ್ಕೆ ತಂದಿದ್ದೇವೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಜನಾದೇಶವನ್ನು ಅವಹೇಳನ ಮಾಡುತ್ತಿರುವಂತೆ ಕಂಡುಬರುತ್ತಿದೆ ಎಂದು ಟಿಎಸ್‌ಎಸ್ ಷೇರು ಸದಸ್ಯ ಲೋಕೇಶ ಹೆಗಡೆ ತಿಳಿಸಿದರು.

ಶುಕ್ರವಾರ ಟಿಎಸ್‌ಎಸ್‌ನ ಯಾವುದೇ ಬಣಕ್ಕೆ ಸೇರದ ಸುಮಾರು ೨೦ ಸಾಮಾನ್ಯ ಷೇರುದಾರರೊಡಗೂಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸಾಮಾನ್ಯ ಸದಸ್ಯರು ಬಹುಮತದಿಂದ ಆಯ್ಕೆ ಮಾಡಿದ ಆಡಳಿತ ಮಂಡಳಿ ಆತಂಕವಿಲ್ಲದೆ ತಮ್ಮ ಅವಧಿಯಲ್ಲಿ ಆಡಳಿತ ಮಾಡಲು ಬಿಡಬೇಕು. ಒಂದೊಮ್ಮೆ ಇವರೂ ಸರಿಯಾಗಿ ಆಡಳಿತ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಷೇರು ಸದಸ್ಯರೇ ಬದಲಾಯಿಸುತ್ತಾರೆ. ಆದರೆ ಈಗಿನಂತೆ ಉಭಯ ಬಣಗಳ ಕಚ್ಚಾಟದಿಂದಾಗಿ ಸಂಸ್ಥೆಯ ಪ್ರತಿಷ್ಠೆ, ಅವಲಂಬಿತ ಸದಸ್ಯರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗಬಾರದು ಎಂದರು.

ನೂರು ವರ್ಷಗಳಿಂದ ನಮ್ಮ ಜಿಲ್ಲೆಯ ತೋಟಗಾರರ ಹೆಮ್ಮೆಯ ಸಂಸ್ಥೆ ಟಿಎಸ್‌ಎಸ್ ಆಗಿದ್ದು, ಯಾವುದೇ ವೈಯಕ್ತಿಕ ಹಿತಾಸಕ್ತಿಗಳಿಲ್ಲದೆ ನಮ್ಮ ಸಂಸ್ಥೆಯ ಪ್ರತಿಷ್ಠೆ ಮತ್ತು ಯಾವುದೇ ಸದಸ್ಯರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗಬಾರದು ಎನ್ನುವ ಉದ್ದೇಶ ಮತ್ತು ಕಾಳಜಿಯಿಂದ, ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದ ಶೇ. ೯೦ರಷ್ಟು ಸಾಮಾನ್ಯ ಷೇರು ಸದಸ್ಯರ ಧ್ವನಿಯಾಗಿ ನಾವು ಬಂದಿದ್ದೇವೆ. ಶ್ರೀಪಾದ ಹೆಗಡೆ ಕಡವೆಯವರ ಉನ್ನತ ಸಹಕಾರಿ ಆದರ್ಶಗಳಿಂದ ಉಚ್ಛ್ರಾಯ ಸ್ಥಿತಿ ತಲುಪಿದ ಈ ಸಂಸ್ಥೆ ಒಂದು ಹಂತದಲ್ಲಿ ತನ್ನ ಮೂಲ ಉದ್ದೇಶಗಳನ್ನು ಮರೆತು ಕಾರ್ಯಕ್ಷೇತ್ರದ ಹೊರಗೆ ಕಾಲಿಟ್ಟ ಸಂದರ್ಭದಲ್ಲಿ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಹಿಂದಿನ ಆಡಳಿತ ಮಂಡಳಿಗೆ ವ್ಯವಸ್ಥಿತವಾದ ಮತ್ತು ಪ್ರಬಲವಾದ ವಿರೋಧವೊಡ್ಡಿದ ಮತ್ತೊಂದು ಬಣವನ್ನು ಅಧಿಕಾರಕ್ಕೆ ತಂದಿದ್ದು ನಮ್ಮಂತ ಸಾಮಾನ್ಯ ಸದಸ್ಯರು. ಆದರೆ ಇತ್ತೀಚಿನ ವಿದ್ಯಮಾನವನ್ನು ಗಮನಿಸಿದರೆ ಜನಾದೇಶದ ಅವಹೇಳನವಾಗುತ್ತಿದೆಯೇನೋ ಎನ್ನಿಸುತ್ತಿದೆ. ಸಂಸ್ಥೆಯ ದೈನಂದಿನ ವ್ಯವಹಾರಗಳು ಕೋರ್ಟು ಕಚೇರಿಯಲ್ಲಿ ನಡೆಯುವುದಕ್ಕಿಂತ ಸಂಘದಲ್ಲೇ ನಡೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಸಂಸ್ಥೆಯ ಠೇವಣಿದಾರರು ಮತ್ತು ಸಾಲಗಾರರು ಮತ್ತು ಎಲ್ಲ ಸದಸ್ಯರಿಗೆ ಸಂಸ್ಥೆಯ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಅಂಥವರ ಧ್ವನಿಯಾಗಿ ಆಗ್ರಹ ಮಾಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಷೇರು ಸದಸ್ಯರುಗಳಾದ ನರಹರಿ ಹೆಗಡೆ ಲಕ್ಕೀಸವಲು, ಸಿ.ಎನ್. ಹೆಗಡೆ ಹೊನ್ನೇಹದ್ದ, ಆರ್.ಎಸ್. ಹೆಗಡೆ ಕಂಪ್ಲಿ, ಶ್ರೀಕಾಂತ ಶಾನಭಾಗ ಹಾರ್ಸಿಕಟ್ಟ, ವಿ.ಎಸ್. ಭಟ್ಟ ಮಸಗುತ್ತಿ, ಸಿ.ಆರ್. ಹೆಗಡೆ, ಜಿ.ಆರ್. ಹೆಗಡೆ ತ್ಯಾಗಲಿ, ರಾಜಾರಾಮ ಹೆಗಡೆ ಬಾಳೇಸರ, ಮಂಜುನಾಥ ಹೆಗಡೆ ತೋಳಗಾರಗದ್ದೆ, ರಾಮಚಂದ್ರ ಹೆಗಡೆ, ಎನ್.ಎಲ್. ಹೆಗಡೆ ತ್ಯಾಗಲಿ, ದಿನೇಶ ಹೆಗಡೆ ಕರ್ಕಿಸವಲು, ಮತ್ತಿತರರು ಇದ್ದರು.

ಠೇವಣಿ ಹಿಂತೆಗೆಯಬಾರದು...

ಯಾವ ಬಣಕ್ಕೂ ಸೇರದ ಟಿಎಸ್‌ಎಸ್‌ನ ಸಾಮಾನ್ಯ ಸದಸ್ಯರಾದ ನಾವು ನ್ಯಾಯಾಲಯದಲ್ಲಿ ನಮ್ಮ ಭಾವನೆ ವ್ಯಕ್ತಪಡಿಸುವ ಸಂದರ್ಭ ಬಂದರೆ ಖಂಡಿತವಾಗಿಯೂ ವ್ಯಕ್ತಪಡಿಸುತ್ತೇವೆ. ನಾವು ನಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳಬೇಕಾದರೆ ಠೇವಣಿಯನ್ನು ಯಾರೂ ಹಿಂತೆಗೆಯಬಾರದು ಎಂದು ಷೇರು ಸದಸ್ಯರು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!