ಖಾಸಗಿ ಡೇರಿಗಳಿಗೆ ಸರ್ಕಾರ ಕಡಿವಾಣ ಹಾಕಲಿ

KannadaprabhaNewsNetwork | Published : Jan 22, 2025 12:33 AM

ಸಾರಾಂಶ

ಗುಂಡ್ಲುಪೇಟೆಯಲ್ಲಿ ಹಾಲಿನ ಡೇರಿ ಅಧ್ಯಕ್ಷರಿಗೆ ಆಡಳಿತ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಚಾಮುಲ್‌ ಅಧ್ಯಕ್ಷ ವೈ.ಸಿ.ನಾಗೇಂದ್ರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಖಾಸಗಿ ಹಾಲಿನ ಡೇರಿಗಳಿಗೆ ಸರ್ಕಾರ ಹಾಗೂ ಕೆಎಂಎಫ್‌ ಕಡಿವಾಣ ಹಾಕಬೇಕಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ, ಚಾಮುಲ್‌ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್‌ ಒತ್ತಾಯಿಸಿದರು.

ಪಟ್ಟಣದ ಲ್ಯಾಂಕ್‌ ಸಹಕಾರ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ, ಸಹಕಾರ ಇಲಾಖೆ ಆಶ್ರಯದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾಕ ಸಂಘದ ಅಧ್ಯಕ್ಷರಿಗೆ ಆಡಳಿತ ನಿರ್ವಹಣೆ ಬಗ್ಗೆ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಖಾಸಗಿ ಹಾಲಿನ ಡೇರಿಗಳು ನಾಯಿಕೊಡೆಗಳಂತೆ ಕೆಲ ಹಳ್ಳಿಗಳಲ್ಲಿ ಒಂದು, ಎರಡಲ್ಲ, ಮೂರು ಡೇರಿಗಳು ತಲೆ ಎತ್ತಿವೆ. ಖಾಸಗಿ ಡೇರಿಗಳಿಂದ ಹಾಲು ಉತ್ಪಾದಕರಿಗೆ ಕ್ಷಣಿಕ ಲಾಭ ತೋರಿಸುತ್ತಿವೆ. ಹಾಲು ಉತ್ಪಾದಕರಿಗೆ ಶಾಶ್ವತ ಯೋಜನೆ ಕೊಡುತ್ತಿಲ್ಲ. ಇದನ್ನು ಹಾಲು ಉತ್ಪಾದಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಖಾಸಗಿ ಹಾಲಿನ ಡೇರಿಗಳು ದಿನೇ ದಿನೇ ಹೆಚ್ಚಳವಾಗುತ್ತಿವೆ. ಸರ್ಕಾರದ ಒಡೆತನದ ಚಾಮುಲ್‌ನಿಂದ ಹಾಲು ಉತ್ಪಾದಕರಿಗೆ ಹಲವು ಸೌಲಭ್ಯ, ಯೋಜನೆ ಜಾರಿ ಮಾಡಿದೆ. ಸೌಲಭ್ಯ ಹಾಗೂ ಯೋಜನೆ ನಿಲ್ಲಿಸಿದರೆ ಆಡಳಿತ ಮಂಡಳಿ ಪ್ರಶ್ನಿಸುವ ಅಧಿಕಾರ ನಿಮಗಿದೆ ಎಂದು ತಿಳಿ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಇರುವುದೇ ಸಹಕಾರ ಸಂಸ್ಥೆಗಳಿಗೆ ತರಬೇತಿ ನೀಡಲು. ಹಾಗಾಗಿ ನಾನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷನಾದ ಮೇಲೆ ಜಿಲ್ಲೆಯ ಸಹಕಾರ ಸಂಘಗಳಿಗೆ ತರಬೇತಿ ಹೆಚ್ಚಿನ ಮಟ್ಟದಲ್ಲಿ ಆಗುತ್ತಿದೆ ಎಂದರು.

ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಗುಜರಾತ್‌ ಮೊದಲ ಸ್ಥಾನದಲ್ಲಿದೆ ಕರ್ನಾಟಕ ೨ನೇ ಸ್ಥಾನದಲ್ಲಿದೆ. ಕಳೆದ ವರ್ಷ ಪ್ರತಿ ದಿನ ಕೋಟಿ ಲೀಟರ್‌ ಹಾಲು ಉತ್ಪಾದಿಸಿದೆ ಇದು ನಮ್ಮ ಹೆಗ್ಗಳಿಕೆ ವಿಷಯ ಎಂದರು. ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆ ಉದ್ದಿಮೆಯಾಗಿ ಬೆಳೆಯುತ್ತಿದೆ. ಹೈನುಗಾರಿಕೆ ಗ್ರಾಮೀಣ ಜನರ ಜೀವನಕ್ಕೆ ಆಸೆರೆಯಾಗಿದೆ. ಗುಣ ಮಟ್ಟದ ಹಾಲು ಪೂರೈಕೆಯೂ ಸ್ಥಳಿಯ ಹಾಲಿನ ಡೇರಿಗಳಲ್ಲಿ ಹೆಚ್ಚಾಗಬೇಕಿದೆ ಎಂದರು.

ಮೈಸೂರು ಕೆಐಸಿಎಂ ಪ್ರಾಂಶುಪಾಲ ಪುಟ್ಟಸ್ವಾಮಿ, ಚಾಮುಲ್‌ ಕೃಷಿ ಅಧಿಕಾರಿ ರಿತೇಶ್‌ ಸಭೆಯಲ್ಲಿ ವಿಷಯ ಮಂಡನೆ ಮಾಡಿದರು. ತರಬೇತಿ ಕಾರ್ಯಕ್ರಮದಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಪಿ.ಪದ್ಮನಾಭ, ಚಾಮುಲ್‌ನ ಗುಂಡ್ಲುಪೇಟೆ ಮಾರ್ಗ ವಿಸ್ತರಣಾಧಿಕಾರಿ ಪ್ರಕಾಶ್‌ ಕೆ.ಸಿದ್ದಲಿಂಗೇಶ್‌ ಕೋರೆ, ರಂಜಿತ, ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮನುಜ ಸೇರಿದಂತೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಇದ್ದರು.

ಹಾಲು ಉತ್ಪಾದಕರು ಹೋರಾಟ ಮಾಡಿ

ಸೌಲಭ್ಯ ಪಡೆಯಬೇಕಾದ ಪರಿಸ್ಥಿತಿ

ದೇಶದ ಆರ್ಥಿಕತೆಯ ಹೆಬ್ಬಾಗಿಲು ಸಹಕಾರ ಸಂಸ್ಥೆಗಳಾದರೂ ಸರ್ಕಾರಗಳು ನಿರೀಕ್ಷಿತ ಪ್ರಮಾಣದಲ್ಲಿ ಸೌಲಭ್ಯ ನೀಡುತ್ತಿಲ್ಲ. ಹಾಲು ಉತ್ಪಾದಕರು ಹೋರಾಟದ ಮೂಲಕವೇ ಸೌಲಭ್ಯ ಪಡೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್) ದ ಅಧ್ಯಕ್ಷ ವೈ.ಸಿ.ನಾಗೇಂದ್ರ ಅಸಮಧಾನ ವ್ಯಕ್ತಪಡಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಿಗೆ ಆಡಳಿತ ನಿರ್ವಹಣೆ ಬಗ್ಗೆ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಾಮುಲ್‌ ಪ್ರತಿ ತಿಂಗಳು ಕನಿಷ್ಠ ೩೦ಲಕ್ಷ ತೆರಿಗೆ ಪಾವತಿ ಮಾಡುತ್ತಿದೆ. ಚಾಮುಲ್‌ ನೌಕರರ ಸಂಬಳ, ಡಿಸೇಲ್‌ ಬಳಕೆ ಇನ್ನಿತರ ಖರೀದಿ ಸೇರಿದರೆ ಕೋಟಿ ತೆರಿಗೆ ಸರ್ಕಾರಕ್ಕೆ ಕಟ್ಟುತ್ತಿದ್ದೇವೆ. ಒಕ್ಕೂಟಕ್ಕೆ ಸೌಲಭ್ಯ ಕೇಳಿದರೂ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರೈತರಿಗೆ ಹಾಲಿನ ದರ ಏರಿಕೆ ಮಾಡಲು ಕೆಎಂಎಫ್‌ಗೂ ಅಧಿಕಾರವಿಲ್ಲ. ಸಚಿವರ ಕೇಳಿ ದರ ಏರಿಕೆ ಮಾಡಬೇಕಾದ ಸ್ಥಿತಿ ಬಂದಿದೆ. ಸಹಕಾರ ಸಂಘಗಳು ಹೋರಾಟ ಮಾಡಿ ದರ ಏರಿಕೆ ಮಾಡಬೇಕಾಗುತ್ತದೆ. ನಾನಂತು ಹೋರಾಟಕ್ಕೆ ಸಿದ್ಧನಿದ್ದೇನೆ ನೀವು ಹೋರಾಟಕ್ಕೆ ಇಳಿಯಿರಿ ಎಂದು ಹಾಲಿನ ಡೇರಿ ಅಧ್ಯಕ್ಷರಿಗೆ ಸಲಹೆ ನೀಡಿದರು.

Share this article