ನಟ ಬಳ್ಳಾರಿ ರಾಘವ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ನೀಡುವಂತಾಗಲಿ

KannadaprabhaNewsNetwork |  
Published : Apr 18, 2026, 02:00 AM IST
ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ನಾಟ್ಯ ಕಲಾಪ್ರಪೂರ್ಣ ಬಳ್ಳಾರಿ ರಾಘವರ 80ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಅಸೋಸಿಯೇಷನ್‌ನ ಪದಾಧಿಕಾರಿಗಳು ಚಾಲನೆ ನೀಡಿದರು.  | Kannada Prabha

ಸಾರಾಂಶ

ರಂಗಭೂಮಿಗೆ ರಾಘವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದರು.

ಬಳ್ಳಾರಿ: ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ಇಲ್ಲಿನ ರಾಘವ ಕಲಾಮಂದಿರದಲ್ಲಿ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವ ಅವರ 80ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಳ್ಳಾರಿ ರಾಘವರು ರಂಗಭೂಮಿಗೆ ನೀಡಿದ ಕೊಡುಗೆ ಕುರಿತು ಉಪನ್ಯಾಸ ನೀಡಿದ ಆಧ್ಯಾತ್ಮಿಕ ಚಿಂತಕ ಎನ್. ಬಸವರಾಜ್, ರಂಗಭೂಮಿಗೆ ರಾಘವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದರು. ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಅಮೋಘ ಸ್ಥಾನ ಪಡೆದ ಮಹಾನ್ ನಟ ಬಳ್ಳಾರಿ ರಾಘವರು, ಕನ್ನಡ ರಂಗಭೂಮಿಯನ್ನು ಆಧುನಿಕ ದಿಕ್ಕಿನಲ್ಲಿ ಮುನ್ನಡೆಸಿದ ಪ್ರಮುಖರಲ್ಲೊಬ್ಬರು. ಸ್ವಾಭಾವಿಕ ಅಭಿನಯ ಶೈಲಿ, ಸಂಭಾಷಣೆ, ಪಾತ್ರದ ಭಾವ ನೈಜವಾಗಿರಬೇಕು ಎಂದು ಪ್ರತಿಪಾದಿಸುತ್ತಿದ್ದರಲ್ಲದೆ, ರಂಗಭೂಮಿಯಲ್ಲಿ ಹಲವು ತಾಂತ್ರಿಕ ಮತ್ತು ಕಲಾತ್ಮಕ ಬದಲಾವಣೆಗಳನ್ನು ತಂದರು ಎಂದು ಹೇಳಿದರು.

ವಕೀಲರಾಗಿದ್ದುಕೊಂಡೇ ನಾಟಕರಂಗದಲ್ಲೂ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ನಾಟಕಗಳು ಪ್ರದರ್ಶಿಸಿದರು. ಮಹಾತ್ಮಾ ಗಾಂಧಿ, ಸರೋಜನಿ ನಾಯ್ಡು, ಹಾಗೂ ವಿಶ್ವಕವಿ ರವೀಂದ್ರನಾಥ್ ಠಾಗೋರ್ ಮುಂತಾದವರು ರಾಘವರ ನಾಟಕಗಳು ನೋಡಿ ಮೆಚ್ಚಗೆ ವ್ಯಕ್ತಪಡಿಸಿದ್ದರು. ಇಂತಹ ವಿಶ್ವವಿಖ್ಯಾತ ನಟ ಬಳ್ಳಾರಿ ರಾಘವ ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಪ್ರಶಸ್ತಿ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.

ರಾಘವ ಮೆಮೋರಿಯಲ್ ಅಸೋಸಿಯೇಷನ್ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಥೆಯ ಗೌರವಾಧ್ಯಕ್ಷ ಕೆ. ಚನ್ನಪ್ಪ, ಅಧ್ಯಕ್ಷ ಕೆ. ಕೊಟೇಶ್ವರ ರಾವ್, ಉಪಾಧ್ಯಕ್ಷ ಎಚ್. ವಿಷ್ಣುವರ್ಧನ ರೆಡ್ಡಿ, ಬಾಣಾಪುರ ರಮೇಶ ಗೌಡ, ಚೆಲ್ಲಾ ಅಮರೇಂದ್ರ ನಾಥ ಚೌಧರಿ,

ಜಿ.ಆರ್. ವೆಂಕಟೇಶಲು, ಕೆ. ಪೊಂಪನಗೌಡ, ಬಿ.ಎಂ. ಬಸವರಾಜ, ಸುರೇಂದ್ರ ಬಾಬು, ಪಿ. ಶ್ರೀನಿವಾಸಲು, ಕೃಷ್ಣ, ಶೇಷರೆಡ್ಡಿ ಹಾಗೂ ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು. ಎನ್. ಪ್ರಕಾಶ್, ಕೋಲಾಚಲಂ ಸಂಧ್ಯಾ ಹಾಗೂ ಪಿ.ಎಂ. ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಮರಿಯಮ್ಮನಹಳ್ಳಿಯ ಬಿ.ಎಂ. ಪ್ರಭು ರಚನೆ- ನಿರ್ದೇಶನದಲ್ಲಿ ಮಸಾರಿ ನೆಲ್ಕುದುರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ತಂಡದಿಂದ "ರೈತರ ಧ್ವನಿ " ನಾಟಕ ಪ್ರದರ್ಶನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ನೈಜ ನಂಬಿಕೆ, ಸಂಸ್ಕೃತಿ ಪ್ರತಿಬಿಂಬಿಸುವ ಸಾಹಿತ್ಯ: ಡಾ. ವೀರೇಂದ್ರ ಪಾಲ್
ಹಿಮೋಫಿಲಿಯಾ ಬಗ್ಗೆ ಭಯ ಬೇಡ: ಡಾ. ರಾಜೇಂದ್ರ ಗಡಾದ