ಹಸಿರು ಸಾಲುಗಳ ಗತವೈಭವ ಮರಳಿಸಲಿ: ನಂದಿನಿ ಜಯರಾಂ

KannadaprabhaNewsNetwork |  
Published : Jun 22, 2026, 02:00 AM IST
21ಕೆಎಂಎನ್ ಡಿ20 | Kannada Prabha

ಸಾರಾಂಶ

ಶಕ್ತಿ ಕೇಂದ್ರ ಅನಿಸಿಕೊಂಡಿರುವ ವಿಧಾನಸೌಧದಲ್ಲೇ ರೈತರಿಗೆ ಅನ್ಯಾಯವಾಗುತ್ತಿದೆ. ಇಂದಿಗೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತರ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ. ಯಾವ ಸರ್ಕಾರವೂ ಅನ್ನದಾತನ ಸಮಸ್ಯೆ ಪರಿಹರಿಸಲು ಸಮರ್ಪಕವಾದ ಯೋಜನೆ ರೂಪಿಸಿಲ್ಲ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಹಸಿರು ಶಾಲುಗಳ ಗತವೈಭವ ಮತ್ತೆ ಮರಳಿದಾಗ ಮಾತ್ರ ಅನ್ನದಾತರ ಬವಣೆ ಸರ್ಕಾರಕ್ಕೆ ತಲುಪಿ ಸಮಸ್ಯೆಗಳಿಗೆ ಪರಿಹಾರ ದೊರೆಯಲು ಸಾಧ್ಯ ಎಂದು ರೈತನಾಯಕಿ ನಂದಿನಿ ಜಯರಾಂ ಹೇಳಿದರು.

ಮೇಲುಕೋಟೆ ಸಂಸ್ಕೃತ ಸಂಶೋಧನಾ ಕೇಂದ್ರದಲ್ಲಿ ಶನಿವಾರ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ರೈತ ಹೋರಾಟಗಾರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ರೈತ ಚಳವಳಿಯ ಪ್ರಖ್ಯಾತ ಹೋರಾಟಗಾರರು ಮರೆಯಾಗಿದ್ದಾರೆ. ಬೃಹತ್ ರೈತ ಚಳವಳಿಗಳು ಇತಿಹಾಸದ ಪುಟ ಸೇರಿಯಾಗಿದೆ. ಅಂದಿನ ಹಸಿರು ಶಾಲುಗಳ ಗತವೈಭವ ಮತ್ತೆ ಮರುಕಳಿಸಲು ರೈತಸಂಘದವರು ಮುಂದಾಗಬೇಕು ಎಂದರು.

ಶಕ್ತಿ ಕೇಂದ್ರ ಅನಿಸಿಕೊಂಡಿರುವ ವಿಧಾನಸೌಧದಲ್ಲೇ ರೈತರಿಗೆ ಅನ್ಯಾಯವಾಗುತ್ತಿದೆ. ಇಂದಿಗೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತರ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ. ಯಾವ ಸರ್ಕಾರವೂ ಅನ್ನದಾತನ ಸಮಸ್ಯೆ ಪರಿಹರಿಸಲು ಸಮರ್ಪಕವಾದ ಯೋಜನೆ ರೂಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ಯುವಕರು ಚಿನ್ನದಂತಾ ಗತಕಾಲದ ಚಳವಳಿಗಳ ಮಾಹಿತಿ ಪಡೆದು ಜಾಗೃತರಾಗಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಚಳವಳಿ ನಿರಂತರವಾಗಿ ನಡೆಯಬೇಕು. ರೈತರ ಮನೆ ಜೀವಗಳು ಉಳಿಯುವಂತಾಗಬೇಕು ಎಂಬುದು ರೈತಸಂಘದ ಆಶಯವಾಗಿದೆ ಎಂದರು.

ರಾಜ್ಯ ರೈತಸಂಘ ಮಂಡ್ಯ ಜಿಲ್ಲೆಯಲ್ಲಿ ಪ್ರಬಲವಾಗಿದೆ. ಹಲವು ದಶಕಗಳಿಂದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಮುಖಂಡರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಜಿಲ್ಲೆಯ ಹಲವು ಮುಖಂಡರು ಮನೆಯ ಹಿತವನ್ನು ಬದಿಗಿಟ್ಟು ದಶಕಗಳ ಕಾಲದಿಂದ ರೈತಪರ ಹೋರಾಟದಲ್ಲಿ ಭಾಗಿಯಾಗಿದ್ದೀರಿ. ನಾನು ತಂದೆಯವರ ಕಾಲದಲ್ಲಿ ಹೋರಾಟವನ್ನು ನೋಡಿದ್ದೆ. ಯಾವುದೇ ಚಳವಳಿಯಲ್ಲಿ ಭಾಗವಹಿಸಿಲ್ಲ. ಆದರೆ, ಹೋರಾಟಗಾರರ ಬದಕು ಬವಣೆ ತಿಳಿದಿದ್ದೇನೆ ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳ 100ಕ್ಕೂ ಹೆಚ್ಚು ರೈತ ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲಾಗುತ್ತಿದೆ. ರೈತಸಂಘ ಸಕ್ರಿಯವಾಗಿ, ಹೋರಾಟಗಳು ನಿರಂತರವಾಗಿದ್ದರೆ ರೈತನಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತವೆ ಎಂದರು.

ಹೋರಾಟದ ಜೊತೆಗೆ ರೈತಸಂಘ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಿ ಹಮ್ಮಿಕೊಳ್ಳಬೇಕಾಗಿದೆ. ನಾನು ರೈತಸಂಘದ ಜೊತೆಗಿರುತ್ತೇನೆ. ಎಲ್ಲಾ ರೀತಿಯ ಸಹಕಾರಗಳನ್ನೂ ನೀಡಲು ಸದಾಸಿದ್ಧವಾಗಿದ್ದೇನೆ. ರೈತಸಂಘ ರೈತಪರ ಕೆಲಸವನ್ನು ಹೆಚ್ಚಾಗಿ ಮಾಡಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ರಾಜ್ಯರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಮಂಜುನಾಥ್, ಹಿರಿಯ ರೈತಮುಖಂಡ ನಾಗಣ್ಣ, ರೈತಸಂಘದ ಮುಖಂಡರು ಭಾಗವಹಿಸಿದ್ದರು.

100ಕ್ಕೂ ಹೆಚ್ಚು ಹೊರಾಟಗಾರಿಗೆ ಗೌರವಾರ್ಪಣೆ:

ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳ ರೈತ ಹೋರಾಟಗಾರರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಪ್ರತಿ ರೈತ ಮುಖಂಡರಿಗೆ ಕೆ.ಎಸ್.ಪುಟ್ಟಣ್ಣಯ್ಯ, ಪ್ರೊ.ನಂಜುಂಡಸ್ವಾಮಿ ಇತರ ಐದು ಮಂದಿ ಪ್ರಮುಖರ ಭಾವಚಿತ್ರವಿರುವ ಆಕರ್ಷಕ ಸ್ಮರಣಿಕೆ, 3000 ರು. ನಗದು, ಅಭಿನಂದನಾ ಪತ್ರ ಮೇಲುಕೋಟೆ ಪುಳಿಯೋಗರೆ ಪೌಚ್ ನೀಡಿ ವಿಶೇಷವಾಗಿ ಗೌರವಿಸಲಾಯಿತು.

ಕೆ.ಎಸ್.ಪುಟ್ಟಣ್ಣಯ್ಯರ ಅವಧಿಯಿಂದಲೂ ಕಾವೇರಿ ಚಳವಳಿ,ಕಬ್ಬು ಬೆಳೆ ಹೋರಾಟ, ಸ್ಥಳೀಯ ಸಮಸ್ಯೆಗಳ ಹೋರಾಟ ಸೇರಿದಂತೆ ಎಲ್ಲಾ ಚಳವಳಿಗಳಲ್ಲಿ ಭಾಗವಹಿಸಿದ ಪಾಂಡವಪುರ ತಾಲೂಕಿನ ನ್ಯಾಮನಹಳ್ಳಿಯ ಶಿವರಾಮೇಗೌಡ, ಹೊಸಕೋಟೆ ರಾಮೇಗೌಡ, ಮೇಲುಕೋಟೆ ಲಕ್ಷ್ಮೇಗೌಡ ನಾರಾಯಣಪುರ ಜಯರಾಮೇಗೌಡ, ಶ್ರೀರಂಗಪಟ್ಟಣ ಮಹದೇವಪುರ ನಾಗೇಂದ್ರ, ತಮ್ಮೇಗೌಡ ಮದ್ದೂರು ರವಿಕುಮಾರ್ ಸೇರಿದಂತೆ 100ಕ್ಕೂಹೆಚ್ಚು ರೈತ ಹೋರಾಟಗಾರರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿನಂದಿಸಿದರು.

ಸಂಸ್ಕೃತ ಸಂಶೋಧನಾ ಸಂಸ್ಥೆ ಕುಲಸಚಿವ ಡಾ.ಎಸ್.ಕುಮಾರ್ ಭಗವದ್ ರಾಮಾನುಜ ಮಾತನಾಡಿ, ರಾಷ್ಟ್ರೀಯ ಸಂಶೋಧನಾ ಕೇಂದ್ರದಲ್ಲಿ ವಾರ್ಷಿಕವಾಗಿ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಇಬ್ಬರು ರೈತರನ್ನು ಪ್ರತಿವರ್ಷ ಅಭಿನಂದಿಸುವುದಾಗಿ ಘೋಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕಾಡೆಮಿಗಳಿಂದ ಹೊರನಾಡು ಕನ್ನಡಿಗರಿಗೆ ಪ್ರಾಶಸ್ತ್ಯ ಸಿಗಲಿ: ಕನ್ನಡ ಸಂಘಗಳು
ಅವೈಜ್ಞಾನಿಕ ಕಾಮಗಾರಿಗೆ ವಿರೋಧ: ರಸ್ತೆ ತಡೆದು ಪ್ರತಿಭಟನೆ