ಲಕ್ಷ್ಮೇಶ್ವರ: ಬ್ರಿಟೀಷರ ಕಾಲದ ಕಾನೂನು ಬಿಟ್ಟು ಭಾರತೀಯ ನ್ಯಾಯ ಸಂಹಿತೆ ಕಾನೂನು ಜಾರಿಗೆ ತರಲು ನ್ಯಾಯಾಂಗ ಇಲಾಖೆಯ ಎಲ್ಲರು ಶ್ರಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ಭಾರತೀಯ ನ್ಯಾಯ ಸಂಹಿತೆಯಲ್ಲಿ ನ್ಯಾಯದಾನಕ್ಕೆ ಆದ್ಯತೆ ನೀಡಲಾಗಿದೆ. ಬ್ರಿಟೀಷರ ಹಲವು ಕಾನೂನು ತಿದ್ದುಪಡಿ ಮಾಡಿ ಭಾರತೀಯ ಕಾನೂನು ಜಾರಿಗೆ ತರುವ ಮೂಲಕ ನ್ಯಾಯದಾನಕ್ಕೆ ಹೊಸ ಆಯಾಮ ನೀಡಲಾಗಿದೆ. ಭಾರತೀಯತೆ ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಬ್ರಿಟೀಷರ ಕಾನೂನು ಶಿಕ್ಷೆ ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದವು. ಭಾರತೀಯರ ಕಾನೂನುಗಳಲ್ಲಿ ನ್ಯಾಯದಾನದ ವಿಳಂಬ ತಪ್ಪಿಸಿ ಅಪರಾಧಿಗೆ ಶಿಕ್ಷೆ ನೀಡುವ ಕಾರ್ಯ ಸರಳೀಕರಣಗೊಳಿಸುವುದು ಹೊಸ ಕಾನೂನುಗಳ ಉದ್ದೇಶವಾಗಿದೆ ಎಂದು ಹೇಳಿದ ಅವರು, ನ್ಯಾಯಾಂಗ ಇಲಾಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಾನೂನುಗಳನ್ನು ಜಾರಿಗೆ ತರುವ ಕಾರ್ಯವಾಗಲಿ, ಅವು ಕೇವಲ ಪುಸ್ತಕದಲ್ಲಿ ಮಾತ್ರ ಉಳಿಯದಂತಾಗಬಾರದು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಮಾತನಾಡಿ, ನೂತನ ಕಾನೂನುಗಳ ಕುರಿತು ಕಾರ್ಯಾಗಾರದಲ್ಲಿ ತಿಳಿಸಿಕೊಡುವ ಕಾರ್ಯ ಉಪನ್ಯಾಸಕರು ಮಾಡಬೇಕು ಎಂದು ಹೇಳಿದರು.ಈ ವೇಳೆ ನ್ಯಾಯಾಲಯದ ಆವರಣದಲ್ಲಿ ಇ-ಸೇವಾ ಕೇಂದ್ರದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ.ಶ್ರೀಶಾನಂದ ನೆರವೇರಿಸಿದರು.
ಮಹೇಶ ಹಾರೂಗೇರಿ ನಿರೂಪಿಸಿದರು, ವಿಠಲ್ ನಾಯ್ಕ ಸ್ವಾಗತಿಸಿದರು. ಎ.ಟಿ.ಕಟ್ಟಿಮನಿ ವಂದಿಸಿದರು.