ಸಾಧನೆ ಮಾಡದ ಸಚಿವರ ಕೈಬಿಡಲಿ

KannadaprabhaNewsNetwork |  
Published : Jun 12, 2025, 01:29 AM IST
11ಕೆಡಿವಿಜಿ1, 2, 3, 4-ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ. | Kannada Prabha

ಸಾರಾಂಶ

ರಾಜ್ಯ ಸಚಿವ ಸಂಪುಟದಲ್ಲಿ ಜಿಡ್ಡು ಹಿಡಿದು ಹೋಗಿರುವಂತಹ ಹಳೆಯ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಸಂಪುಟ ವಿಸ್ತರಣೆ ಬಗ್ಗೆ ಮತ್ತೆ ಧ್ವನಿ ಎತ್ತಿದ್ದಾರೆ.

- ನಾನು ಸನ್ಯಾಸಿಯಲ್ಲ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ: ಚನ್ನಗಿರಿ ಶಾಸಕ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸಚಿವ ಸಂಪುಟದಲ್ಲಿ ಜಿಡ್ಡು ಹಿಡಿದು ಹೋಗಿರುವಂತಹ ಹಳೆಯ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಸಂಪುಟ ವಿಸ್ತರಣೆ ಬಗ್ಗೆ ಮತ್ತೆ ಧ್ವನಿ ಎತ್ತಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆಯೆಂದು ಹೇಳುತ್ತಾರೆ. ಆದರೆ, ಕೆಲ ಸಚಿವರಂತೂ ಏನೂ ಸಾಧನೆಯನ್ನೇ ಮಾಡಿಲ್ಲ. ಸಂಪುಟದಲ್ಲಿರುವ 8-10 ಸಚಿವರನ್ನು ಕೈಬಿಡಬೇಕು. ಹಳಬರು ಅಧಿಕಾರ ಅನುಭವಿಸಿ, ಜಿಡ್ಡುಗಟ್ಟಿ ಹೋಗಿದ್ದಾರೆ ಎಂದು ಜರಿದರು.

ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ, ಉತ್ತಮವಾಗಿ ಕೆಲಸ ಮಾಡುತ್ತಾರೆ. ಈ ಬಗ್ಗೆ ಪಕ್ಷದ ವರಿಷ್ಠರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಲಿ. ನಾನು ಸನ್ಯಾಸಿಯಂತೂ ಅಲ್ಲ. ಸಚಿವ ಸ್ಥಾನ ಕೊಟ್ಟರೆ ಖಂಡಿತವಾಗಿಯೂ ಅತ್ಯುತ್ತಮವಾಗಿ ನಿಭಾಯಿಸುತ್ತೇನೆ ಎಂದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹಿರಿಯರು. ಶಾಂತನಗೌಡರಿಗೆ ಸಚಿವ ಸ್ಥಾನ ನೀಡಿದರೂ ನಾನು ಖುಷಿಪಡುತ್ತೇನೆ. ಒಂದು ಜಿಲ್ಲೆಗೆ 2 ಸಚಿವ ಸ್ಥಾನ ಕೊಡಬಾರದು ಅಂತಾ ಏನಾದರೂ ಇದೆಯಾ? ಪಕ್ಷದ ಹೈಕಮಾಂಡ್‌ ಈಗಿನ ಸಚಿವರ ರಿಪೋರ್ಟ್‌, ಸಾಧನೆ ನೋಡಿ, ಸಾಧನೆ ಮಾಡದ ಸಚಿವರನ್ನು ಸಂಪುಟದಿಂದ ಕೈಬಿಡಲಿ. ಐದಾರು ಸಲ ಗೆದ್ದಿರುವಂತಹ ಶಾಸಕರಿಗೆ ಇನ್ನೂ ಸಚಿವ ಸ್ಥಾನ ಸಿಕ್ಕಿಲ್ಲ. ಅಂತಹ ಅವಕಾಶ ವಂಚಿತ ಶಾಸಕರಿಗೂ ಸಚಿವ ಸ್ಥಾನ ಸಿಗುವಂತಾಗಲಿ. ಈ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಮರು ಜಾತಿ ಜನಗಣತಿ ಸ್ವಾಗತಿಸುವೆ:

ಜಾತಿ ಗಣತಿ ವಿಚಾರ, ಮರು ಜಾತಿಗಣತಿ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಜಾತಿಗಣತಿ ವಿಚಾರವಾಗಿ ಮಾತನಾಡಿದ್ದ ಬಗ್ಗೆ ದೃಶ್ಯ ಮಾಧ್ಯಮದಲ್ಲಿ ಒಂದಿಷ್ಟು ಗಮನಿಸಿದ್ದೇನಷ್ಟೆ. ಸಿಎಂ ಹೇಳಿಕೆಯಂತೆ ಮರು ಜಾತಿಗತಿ ಮಾಡುತ್ತಿದ್ದಾರೆ, ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

- - -

(ಟಾಪ್‌ ಕೋಟ್‌) ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಈಗ ಮಾತನಾಡುವುದು ಬೇಡ. ಉತ್ತಮ ಮುಖ್ಯಮಂತ್ರಿ ಇದ್ದಾರೆ, ಉತ್ತಮ ಆಡಳಿತ ನೀಡುತ್ತಿದ್ದಾರೆ. ನಾಡಿನೆಲ್ಲೆಡೆ ಉತ್ತಮ ಮಳೆ, ಬೆಳೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಬೇಡ. ಬಳ್ಳಾರಿಯಲ್ಲಿ ಸಂಸದರು, ಶಾಸಕರ ಮೇಲಿನ ಇಡಿ ದಾಳಿ ವಿಚಾರ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುವೆ.

- ಬಸವರಾಜ ವಿ.ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ

- - -

-11ಕೆಡಿವಿಜಿ1, 2, 3, 4.ಜೆಪಿಜಿ: ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌