ರಾಣಿಬೆನ್ನೂರು: ಶೋಷಿತ ಸಮಾಜಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮಿಗಳು ನುಡಿದರು.
ನಗರದ ಹಲಗೇರಿ ರಸ್ತೆ ಶ್ರೀ ಬೀರಲಿಂಗೇಶ್ವರ (ಹೊರಗುಡಿ) ದೇವಸ್ಥಾನದ ಆವರಣದಲ್ಲಿ ಶುಕ್ರವಾರ ತಾಲೂಕು ಕುರುಬ ನೌಕರರ ಸಂಘ, ಪ್ರದೇಶ ಕುರುಬರ ಸಂಘದ ತಾಲೂಕು ಘಟಕ, ಕುರುಬ ಸಮಾಜದ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ತಾಲೂಕು ಕುರುಬ ನೌಕರರ ಸಮಾವೇಶ, ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಬಲರಾದಲ್ಲಿ ಯಾವುದೇ ಸಮುದಾಯ ಬಲಿಷ್ಠವಾಗಿ ಬೆಳೆಯಲು ಸಾಧ್ಯ. ಪೋಷಕರು ಅನ್ಯ ವಿಷಯಗಳಿಗೆ ಪ್ರಾಧಾನ್ಯ ನೀಡದೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಒತ್ತು ನೀಡಬೇಕು. ಬೇರೆಯವರ ಮಕ್ಕಳ ಜತೆ ತುಲನೆ ಮಾಡಿ ತಮ್ಮ ಮಕ್ಕಳಲ್ಲಿ ಕೀಳರಿಮೆ ಉಂಟು ಮಾಡದೇ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ನಾವು ಮಕ್ಕಳಿಗೆ ಎಷ್ಟರ ಮಟ್ಟಿಗೆ ಶಿಕ್ಷಣ ನೀಡುತ್ತಿದ್ದೇವೆ ಎನ್ನುವ ಕುರಿತು ಸಮಾಜದ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪೋಷಕರು ಮಾರುಕಟ್ಟೆಗೆ ತೆರಳಿದಾಗ ಮಕ್ಕಳಿಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಗರದಲ್ಲಿ ಸಮಾಜಕ್ಕೆ ಸೇರಿದ 45 ಎಕರೆ ಜಾಗವಿದ್ದು, ಅದನ್ನು ರಾಜ್ಯಕ್ಕೆ ಮಾದರಿ ರೀತಿಯಲ್ಲಿ ಬಳಕೆ ಮಾಡಬೇಕು ಎಂದರು.ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಆರ್. ಶಂಕರ ಮಾತನಾಡಿ, ಕನಕದಾಸರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಪಾಲನೆ ಮಾಡುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದರು.
ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪಡ್ನೇಶ ಮಾತನಾಡಿ, ಜೀವನದಲ್ಲಿ ಆತ್ಮವಿಶ್ವಾಸ ಬಹುಮುಖ್ಯ. ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಪ್ರಯತ್ನ ಮಾಡಿದಲ್ಲಿ ಯಶಸ್ಸು ಖಚಿತ ಎಂದರು.ನಿವೃತ್ತ ಶಿಕ್ಷಕ ಎಂ.ಎಂ. ಖನ್ನೂರ ಮಾತನಾಡಿ, ಮನುಷ್ಯನಲ್ಲಿ ಸಾಧಿಸುವ ಛಲವಿರಬೇಕು. ಸಮಾಜದ ಬಗ್ಗೆ ಸಮಾಜದ ಜನರು ಕಳಕಳಿ ಹೊಂದಿರಬೇಕು ಹಾಗೂ ಮುಕ್ತ ಮನಸ್ಸಿನಿಂದ ಸಂಘದ ಚಟುವಟಿಕೆಗೆ ಆರ್ಥಿಕ ನೆರವು ನೀಡಬೇಕು. ಜನಪ್ರತಿನಿಧಿಗಳು ಅಧಿಕಾರವಿದ್ದಾಗ ಸಮಾಜದ ಕೆಲಸ ಮಾಡಬೇಕು ಎಂದರು.
ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಸುಭಾಸಚಂದ್ರ ಕುರುಬರ ಅಧ್ಯಕ್ಷತೆ ವಹಿಸಿದ್ದರು.ಡಾ. ಪ್ರವೀಣ ಖನ್ನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ. ದ್ಯಾಮಣ್ಣನವರ, ದ್ಯಾಮವ್ವ ಸತ್ತಗಿ, ಮಂಜುಳಾ ಕಿಲಾರದ, ಮಂಜುಳಾ ಕಂಬಳೇರ, ಬಸವಣ್ಣೆವ್ವ ಮಾಳಗಿ, ರೇಖಾ ಪುಟ್ಟಕ್ಕನವರ, ರತ್ನವ್ವ ಪೂಜಾರ, ಕುಬೇರ ಕೊಂಡಜ್ಜಿ, ಜೆ.ಬಿ. ಮಾಳಗುಡ್ಡಪ್ಪನವರ, ರೇಣುಕಾ ಕುರುಬರ, ದೀಪಾ ಕೊಟ್ಟದ, ಖಂಡೆಪ್ಪ ಪೂಜಾರ, ರಜನಿ ಕರಿಗಾರ, ಮಮತಾ ಆನ್ವೇರಿ, ಮಾಲತೇಶ ಸೋಮಣ್ಣನವರ ಮತ್ತಿತರರಿದ್ದರು.