ಕೊಟ್ಟೂರು: ಪೂರ್ಣ ಮಳೆಯಾಶ್ರಿತ ಪ್ರದೇಶವಾಗಿರುವ ಕೊಟ್ಟೂರು ಕೆರೆ ಈ ಭಾರಿ ಭರ್ತಿಯಾಗಿ ಕೋಡಿ ಬಿದ್ದಿದ್ದು ಕೆರೆಯಲ್ಲಿನ ನೀರನ್ನು ಉಳಿಸಿಕೊಳ್ಳುವ ಯೋಜನೆ ಜೊತೆಗೆ ಕೊಟ್ಟೂರು ಸೇರಿದಂತೆ 17 ಕೆರೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸುವ ಶಾಶ್ವತ ಕಾರ್ಯವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಉಜ್ಜಯನಿ ಪೀಠದ ಜ.ಸಿದ್ದಲಿಂಗ ದೇಶೀ ಕೇಂದ್ರ ಶಿವಾಚಾರ್ಯರು ಒತ್ತಾಯಿಸಿದರು.ಮಂಗಳವಾರ ಕೊಟ್ಟೂರು ಕೆರೆಗೆ ಶಾಸಕ ಕೆ.ನೇಮಿರಾಜ್ ನಾಯ್ಕ್ ಮತ್ತಿತರರೊಂದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಶಾಸಕ ಕೆ.ನೇಮಿರಾಜ್ ನಾಯ್ಕ್ ಮಾತನಾಡಿ, ತಾವು ಮೊದಲನೇ ಬಾರಿಗೆ ಶಾಸಕರಾಗಿದ್ದ ಅವಧಿಯ 2009 ರಲ್ಲಿ ಕೊಟ್ಟೂರು ಕೆರೆ ತುಂಬಿತಲ್ಲದೆ ಕೋಡಿ ಸಹ ಬಿದ್ದಿತ್ತು. ಇದೀಗ ಮತ್ತೆ ಈ ವರ್ಷ ಕೊಟ್ಟೂರು ಕೆರೆಗೆ ಕೋಡಿ ಬಿದ್ದಿರುವುದು ನನ್ನ ಶಾಸಕತ್ವದ ಸಾರ್ಥಕತೆ ಬಂದಿರುವ ಖುಷಿಯಾಗಿದೆ ಎಂದರು.
ಕೊಟ್ಟೂರು ಸೇರಿದಂತೆ 17 ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಕಾರ್ಯಯೋಜನೆ ಸಿದ್ದಗೊಳಿಸಿದ್ದು ಈ ಕಾರಣಕ್ಕಾಗಿ ಕೇಂದ್ರ ಸಚಿವರುಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ವಿ.ಸೋಮಣ್ಣರ ಮೂಲಕ ಕೇಂದ್ರ ಸರ್ಕಾರದ ಅನುದಾನ ಪಡೆಯಲು ತೀವ್ರ ಬಗೆಯ ಪ್ರಯತ್ನ ಸಾಗಿದ್ದು ಇದಕ್ಕೆಂದೇ ದೆಹಲಿಗೆ ನಿಯೋಗದ ಮೂಲಕ ತೆರಳುವೆ ಎಂದರು.ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯರು, ಜಿಪಂ ಮಾಜಿ ಸದಸ್ಯ, ಎಂ.ಎಂ.ಜೆ ಹರ್ಷವರ್ಧನ್ ಮಾತನಾಡಿ, ಕೊಟ್ಟೂರು ಕೆರೆಗೆ ಸುಗಮ ದಾರಿ ನಿರ್ಮಾಣವಾಗಬೇಕು. ಅಲ್ಲದೆ, ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.