ವಿದ್ಯಾರ್ಥಿಗಳು ದೊಡ್ಡ ಕನಸು ಕಂಡು ನನಸಾಗಿಸಿಕೊಳ್ಳಲಿ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ವೇಗವಾಗಿ ಹೆಜ್ಜೆ ಹಾಕುತ್ತಿರುವ ಜಗದಲ್ಲಿ ಸ್ಪರ್ಧೆ ಎದುರಿಸಿ ಜಯ ಗಳಿಸಲು ಯುವ ಸಮುದಾಯವನ್ನು ಸಜ್ಜುಗೊಳಿಸುವ ಜವಾಬ್ದಾರಿ ಈಗಿನ ಶಿಕ್ಷಣದ ಮುಖ್ಯ ಭಾಗವಾಗಿದ್ದು, ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಪರಿವರ್ತನಾ ಕಲಿಕಾ ಕೇಂದ್ರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ನೀಡುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಉದ್ಯಮಿ ವಿಜಯ ಮಾನೆ ಹೇಳಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ವೇಗವಾಗಿ ಹೆಜ್ಜೆ ಹಾಕುತ್ತಿರುವ ಜಗದಲ್ಲಿ ಸ್ಪರ್ಧೆ ಎದುರಿಸಿ ಜಯ ಗಳಿಸಲು ಯುವ ಸಮುದಾಯವನ್ನು ಸಜ್ಜುಗೊಳಿಸುವ ಜವಾಬ್ದಾರಿ ಈಗಿನ ಶಿಕ್ಷಣದ ಮುಖ್ಯ ಭಾಗವಾಗಿದ್ದು, ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಪರಿವರ್ತನಾ ಕಲಿಕಾ ಕೇಂದ್ರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ನೀಡುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಉದ್ಯಮಿ ವಿಜಯ ಮಾನೆ ಹೇಳಿದರು.

ಇಲ್ಲಿನ ಗುರುಭವನದಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ನಡೆದ ಪ್ರೇರಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಅದನ್ನು ನನಸಾಗಿಸಲು ನಿರಂತರವಾಗಿ ಯತ್ನಿಸಬೇಕು. ಕಠಿಣ ಪರಿಶ್ರಮ ಪಡಬೇಕು. ಸಮಯ ವ್ಯರ್ಥವಾಗಿ ಕಳೆಯದೇ ಅಧ್ಯಯನದಲ್ಲಿ ತೊಡಬೇಕು. ನುರಿತ ತರಬೇತಿದಾರರಿಂದ ಹಾನಗಲ್ ತಾಲೂಕಿನ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಸೇರಿದಂತೆ ಎಲ್ಲ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಲಾಗುತ್ತಿದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿಸಲಾಗುತ್ತಿದೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳೂ ಕೂಡ ಜಾಗತಿಕ ಸ್ಪರ್ಧೆಯಲ್ಲಿ ಗೆದ್ದು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು ಎನ್ನುವ ಶಾಸಕ ಶ್ರೀನಿವಾಸ ಮಾನೆ ಅವರ ಒತ್ತಾಸೆಯಂತೆ ಒಂದು ತಂಡ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ ಎಂದರು.

ಬೆಂಗಳೂರಿನ ಡ್ರೀಮ್ ಸ್ಕೂಲ್ ಫೌಂಡೇಶನ್‌ನ ಮುಖ್ಯಸ್ಥ ಡಾ. ಆರ್. ಸುಗಂತ ಮಾತನಾಡಿ, ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಸಿಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಇದೀಗ ಹಾನಗಲ್‌ನಲ್ಲಿಯೂ ಸಿಗುತ್ತಿರುವುದು ಖುಷಿಯ ಸಂಗತಿ. ಉಚಿತವಾಗಿ ತರಬೇತಿ ನೀಡಿ, ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಪಡಿಸುವ ಕೆಲಸ ಪರಿವರ್ತನ ಕಲಿಕಾ ಕೇಂದ್ರದಿಂದ ನಡೆದಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕಿದೆ. ಕಾಲ ಹರಣ ಸಲ್ಲದು. ಗುರಿಯತ್ತ ಚಿತ್ತವಿಟ್ಟು ನಿಷ್ಠೆಯಿಂದ ಶ್ರಮಿಸಿದರೆ ಫಲ ಖಚಿತ. ಅಂತಹ ಆತ್ಮವಿಶ್ವಾಸ ಮೊದಲು ವಿದ್ಯಾರ್ಥಿಗಳಿಗೆ ಬೇಕು ಎಂದರು.

ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಒಂದು ಸಾವಿರ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ, ಈ ಪೈಕಿ 240 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ಒಂದು ತರಬೇತಿಗೆ ನೂರು ದಿನಗಳನ್ನು ನಿಗದಿ ಮಾಡಲಾಗಿದ್ದು, ಮತ್ತೆ ಹೊಸ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಉದ್ಯೋಗ ಆಧಾರಿತ ಕರಕುಶಲ ತರಬೇತಿ ನೀಡುವ ಉದ್ಧೇಶವೂ ಸಂಸ್ಥೆಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದರು.

ಹ್ಯುಮ್ಯಾನಿಟಿ ಫೌಂಡೇಶನ್ ಸಂಸ್ಥಾಪಕಿ ಸ್ವಾತಿ ಮಾಳಗಿ, ಸಂತೋಷ ಅಪ್ಪಾಜಿ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು, ಕಲಿಕಾ ಕೇಂದ್ರದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article