ಯಲಬುರ್ಗಾ: ನಿಮ್ಮೂರಿನಲ್ಲಿ ದೊಡ್ಡ ಕೆರೆ ನಿರ್ಮಿಸಲಾಗುವುದು, ಗ್ರಾಮಸ್ಥರು ಭೂಮಿ ನೀಡಿದರೆ ಸರ್ಕಾರದ ದರಕ್ಕಿಂತಲೂ ನಾಲ್ಕು ದುಪ್ಪಟ್ಟು ಹೆಚ್ಚು ಹಣ ನೀಡುತ್ತೇವೆ. ಸುಮಾರು ೫೦ ಎಕರೆಯಷ್ಟು ಭೂಮಿ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಈ ಭಾಗದಲ್ಲಿ ಯಾವುದೇ ದೊಡ್ಡ ನದಿಯಾಗಲಿ, ಹಳ್ಳವಾಗಲಿ ಹರಿದಿಲ್ಲ. ಯಾವುದೇ ರೀತಿಯ ನೀರಿನ ಮೂಲಗಳಿಲ್ಲ. ಕೆರೆ ನಿರ್ಮಾಣ ಜತೆಗೆ ಈಗಾಗಲೇ ಇರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅವಳಿ ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ ೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ₹೯೭೦ ಕೋಟಿ ನಿಗದಿಪಡಿಸಿ ಘೋಷಿಸಲಾಗಿದೆ. ಈ ಬೃಹತ್ ೩೮ ಕೆರೆ ತುಂಬಿಸುವ ಯೋಜನೆಗೆ ಕನಿಷ್ಠ ೫೦ ಎಕರೆಗಿಂತ ಹೆಚ್ಚಿಗೆ ಜಮೀನು ಪ್ರತಿಯೊಂದು ಗ್ರಾಮದಲ್ಲಿ ನೀಡಬೇಕು ಎಂದು ಮನವಿ ಮಾಡಿದರು.
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಎಂಜಿನಿಯರ್ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸಿ ಕ್ಯಾ. ಮಹೇಶ್ ಮಾಲಗತ್ತಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಎಇಇ ಚನ್ನಪ್ಪ, ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ನವಲಿ ಹಿರೇಮಠ, ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಹನುಮಂತಗೌಡ ಚೆಂಡೂರು, ಮಂಜುನಾಥ ಕಡೇಮನಿ, ವರದಯ್ಯ ಹಿರೇಮಠ, ಈರಪ್ಪ ಕುಡಗುಂಟಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರೆಡ್ಡಿ, ಮಲ್ಲು ಜಕ್ಕಲಿ, ಬಸವರಾಜ ಮ್ಯಾಗೇರಿ, ಪಿಡಿಒ ರೇಣುಕಾ ಹಾಗೂ ಗ್ರಾಮಸ್ಥರು ಇದ್ದರು.