ಒಡೆದು ಹೋದ ವೀರಶೈವ ಸಮಾಜ ಒಗ್ಗೂಡಿಸುವ ಕೆಲಸ ಆಗಲಿ: ನಂದಿಹಳ್ಳಿ ಹಾಲಪ್ಪ

KannadaprabhaNewsNetwork | Published : Mar 18, 2025 12:32 AM

ಸಾರಾಂಶ

ವೀರಶೈವ ಸಮಾಜ ಸಂಸ್ಥಾಪಿಸಿದ ಜಗದ್ಗುರು ರೇಣುಕಾಚಾರ್ಯರು, ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಅವರ ಆದರ್ಶಗಳು ನಮಗೆ ದಾರಿದೀಪವಾಗಿದೆ.

ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ವೀರಶೈವ ಸಮಾಜ ಸಂಸ್ಥಾಪಿಸಿದ ಜಗದ್ಗುರು ರೇಣುಕಾಚಾರ್ಯರು, ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಅವರ ಆದರ್ಶಗಳು ನಮಗೆ ದಾರಿದೀಪವಾಗಿದೆ ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ರಾಜೀವ್‌ ಗಾಂಧಿ ಸಭಾಂಗಣದಲ್ಲಿ, ತಾಲೂಕು ಆಡಳಿತ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿ, ಅಧರ್ಮ ತಲೆದೂರಿದ ಸಂದರ್ಭದಲ್ಲಿ ಜಾತಿ ಸಂಘರ್ಷ ಹೊರತು ಪಡಿಸಿ, ಶರಣ, ಸಂತರು ಉದ್ಭವಿಸಿದ್ದಾರೆ. ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಅವರು, ವೀರಶೈವ ಧರ್ಮಗ್ರಂಥವಾದ ಸಿದ್ದಾಂತ ಶಿಕಾಮಣಿ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ ಎಂದರು.

ಈಚಿಗೆ ವೀರಶೈವ ಧರ್ಮ ಒಡೆದು ಹೋಗಿದೆ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಬೇಡಿಕೆಯನ್ನು, ನಮ್ಮನ್ನಾಳುವ ಸರ್ಕಾರ ಈಡೇರಿಸುತ್ತಿಲ್ಲ ಎಂದರು.

ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಕೆ.ಎಂ. ಬಸಲಿಂಗಸ್ವಾಮಿ ಮಾತನಾಡಿ, ಶರಣ, ಮಹಾತ್ಮರ ಆಚರಣೆಗಳನ್ನು ಘೋಷಣೆ ಮಾಡುವ ಸರ್ಕಾರ ಅವುಗಳ ಆಚರಣೆಗೆ ಅಗತ್ಯ ಅನುದಾನ ನೀಡುತ್ತಿಲ್ಲ, ಈ ಕುರಿತು ಸರ್ಕಾರ ಚಿಂತನೆ ಮಾಡಬೇಕಿದೆ ಎಂದರು.

ವೀರಶೈವ ಸಮಾಜ ಅನೇಕ ಉಪ ಪಂಗಡಗಳಾದರೂ ಎಲ್ಲರೂ ಒಂದೇ ಎಲ್ಲವ ತತ್ವದಡಿಯಲ್ಲಿ ಸಾಗಬೇಕಿದ್ದು, ವೀರಶೈವ ಧರ್ಮ ಎಲ್ಲರನ್ನು ಸಮಾನವಾಗಿ ಕಾಣುತ್ತಿದೆ. ಇಂತಹ ಧರ್ಮ ಸಂಸ್ಥಾಪನೆ ಮಾಡಿರುವ ಜಗದ್ಗುರು ರೇಣುಕಾಚಾರ್ಯರ ತತ್ವಗಳನ್ನು ಅರಿತು ಬಾಳಬೇಕೆಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಅಮಾಮ್‌ ಸಾಹೇಬ್‌ ಮಾತನಾಡಿ, ನಾನು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ ಮ್ಮ ಜೀವನದಲ್ಲಿ ವೀರಶೈವ ಲಿಂಗಾಯಿತ ಸಮಾಜದ ಸಂಸ್ಕಾರವನ್ನು ಅರಿತು ಬದುಕುತ್ತಿದ್ದೇವೆ. ಪ್ರತಿ ವರ್ಷ ಶಿವರಾತ್ರಿಯಂದು ಮನೆಯಲ್ಲಿ ಲಿಂಗಪೂಜೆ ಮಾಡುತ್ತೇವೆ. ನಾನು ಕೊಟ್ಟೂರಿನಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ವೀರಶೈವ ಮಠದಲ್ಲಿ ಸಾಕಷ್ಟು ಸಂಸ್ಕಾರ ಕಲಿತಿದ್ದೇನೆ ಎಂದರು.

ಜಿ.ಎಂ. ಚಂದ್ರಶೇಖರಯ್ಯ ಉಪನ್ಯಾಸ ನೀಡಿದರು.

ಸೋಗಿ ಕಟ್ಟಿಮನಿ ಪುರವರ್ಗ ಮಠದ ಅಭಿನವ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.

ತಹಸೀಲ್ದಾರ್‌ ಜಿ.ಸಂತೋಷಕುಮಾರ್‌, ಎಚ್‌.ಎಂ. ಬೆಟ್ಟಯ್ಯ, ತಾಪಂ ಇಒ ಎಂ.ಉಮೇಶ, ವೀರಶೈವ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ಉಮೇಶ ಮುಂಡವಾಡ ಉಪಸ್ಥಿತರಿದ್ದರು.

ಶಾಂತಮೂರ್ತಿ ಬಿ.ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಪಿ.ಎಂ.ಅಶೋಕ ನಿರೂಪಿಸಿದರು. ಪ್ರಸನ್ನ ಪ್ರಾರ್ಥಿಸಿದರು. ಎ.ಎಂ. ಹಾಲಯ್ಯ ಶಾಸ್ತ್ರಿ ಮತ್ತು ತಂಡದವರಿಂದ ವೇದಘೋಷ ನಡೆಸಿಕೊಟ್ಟರು.

ಇದಕ್ಕೂ ಮುನ್ನ ಜಗದ್ಗುರು ರೇಣುಕಾಚಾರ್ಯ ಭಾವಚಿತ್ರವನ್ನು ಪಟ್ಟಣದ ಗ್ರಾಮ ದೇವತೆ ಮಹಾದ್ವಾರದಿಂದ ಸಕಲ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.

Share this article