ದೇಶದ ಯುವಜನತೆ ಉದ್ಯೋಗದಾತರಾಗಲಿ

KannadaprabhaNewsNetwork |  
Published : Dec 12, 2025, 01:30 AM IST
ಪೋಟೋ: 11ಎಸ್‌ಎಂಜಿಕೆಪಿ01ಶಿವಮೊಗ್ಗದ ಪಿಇಎಸ್ ಸಂಸ್ಥೆಯ ಪ್ರೇರಣಾ ಸಭಾಂಗಣದಲ್ಲಿ ಗುರುವಾರ ವಿಜ್ಡಮ್ ಎಡ್, ಪಿಇಎಸ್ ಐಟಿಎಂ ಕ್ಯಾಂಪಸ್ ಇವರ ಸಹಯೋಗದಲ್ಲಿ  ಆಯೋಜಿಸಿದ್ದ ಜಾಗತಿಕ ಉನ್ನತ ಶಿಕ್ಷಣ ಮತ್ತು ಇಂಟರ್ನ್‌ಶಿಪ್ ಉದ್ಯೋಗಮೇಳವನ್ನು ಪಿಇಎಸ್ ಟ್ರಸ್ಟಿನ ಟ್ರಸ್ಟಿ ಬಿ.ವೈ. ಅರುಣಾದೇವಿ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶದ ಶಕ್ತಿಯಾಗಿರುವ ಯುವಜನತೆ ಕೇವಲ ಉದ್ಯೋಗಗಳನ್ನು ಪಡೆಯುವುದಲ್ಲ, ಉದ್ಯೋಗದಾತರಾಗಬೇಕು ಎಂದು ಪಿಇಎಸ್ ಟ್ರಸ್ಟಿನ ಟ್ರಸ್ಟಿ ಬಿ.ವೈ.ಅರುಣಾದೇವಿ ಹೇಳಿದರು.

ಶಿವಮೊಗ್ಗ: ದೇಶದ ಶಕ್ತಿಯಾಗಿರುವ ಯುವಜನತೆ ಕೇವಲ ಉದ್ಯೋಗಗಳನ್ನು ಪಡೆಯುವುದಲ್ಲ, ಉದ್ಯೋಗದಾತರಾಗಬೇಕು ಎಂದು ಪಿಇಎಸ್ ಟ್ರಸ್ಟಿನ ಟ್ರಸ್ಟಿ ಬಿ.ವೈ.ಅರುಣಾದೇವಿ ಹೇಳಿದರು.

ನಗರದ ಪಿಇಎಸ್ ಸಂಸ್ಥೆಯ ಪ್ರೇರಣಾ ಸಭಾಂಗಣದಲ್ಲಿ ಗುರುವಾರ ವಿಜ್ಡಮ್ ಎಡ್, ಪಿಇಎಸ್ ಐಟಿಎಂ ಕ್ಯಾಂಪಸ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜಾಗತಿಕ ಉನ್ನತ ಶಿಕ್ಷಣ ಮತ್ತು ಇಂಟರ್ನ್‌ಶಿಪ್ ಉದ್ಯೋಗಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಯುವಶಕ್ತಿಯೇ ದೇಶದ ಶಕ್ತಿಯಾಗಿದೆ. ನಮ್ಮ ಯುವಕರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಪ್ರಧಾನಿ ಮೋದಿಯವರ ಕನಸ್ಸನ್ನು ನನಸು ಮಾಡಲು, ದೇಶವನ್ನು ಬಲಿಷ್ಠವಾಗಿ ಕಟ್ಟಲು ಯುವಜನರ ಪಾತ್ರ ಅಪಾರವಾಗಿದೆ. ಇಲ್ಲಿ ಎಲ್ಲಾ ಸಂಪತ್ತು ಇದೆ. ಮಾನವಶಕ್ತಿ ಇದೆ. ಜಾಣ್ಮೆಇದೆ. ಓದೂ ಇದೆ ಇವುಗಳನ್ನೆಲ್ಲಾ ಸಮರ್ಥವಾಗಿ ಬಳಸಿಕೊಳ್ಳಬೇಕು. ಯಾವುದೇ ಬದಲಾವಣೆ ಆಗುವುದಾದರೆ ಅದು ನಿಮ್ಮಂತಹ ಯುವಕ ಯುವತಿಯರಿಂದ ಮಾತ್ರ. ನಿಮ್ಮ ಯುವಶಕ್ತಿಯಿಂದಲೇ ಇಂದು ಭಾರತ ವಿಶ್ವದ ಗಮನ ಸೆಳೆದಿದೆ ಎಂದರು.ವಿಜ್ಡಮ್ ಸಂಸ್ಥೆಯು ಒಂದು ಉತ್ತಮವಾದ ಕೆಲಸವನ್ನು ನಮ್ಮ ಸಂಸ್ಥೆಯಲ್ಲಿ ಮಾಡುತ್ತಿದೆ. ಇದರ ಪ್ರಯೋಜನವನ್ನು ಯುವಕರು ಪಡೆದುಕೊಳ್ಳಬೇಕು. ನಮ್ಮ ಪಿಇಎಸ್ ಸಂಸ್ಥೆಯೂ ಯುವಕರಿಗೆ ಉದ್ಯೋಗ ಅವಕಾಶಗಳು ಕೇವಲ ಬೆಂಗಳೂರಿನಂತಹ ನಗರಕ್ಕೆ ಸೀಮಿತಗೊಳ್ಳಬಾರದು ಎಂಬ ಹಿನ್ನೆಲೆಯಲ್ಲಿ ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗದಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇಂದು ಇದು ಹೆಮ್ಮರವಾಗಿ ಬೆಳೆದಿದೆ. ಸಾವಿರಾರು ಯುವಕರು ಉದ್ಯೋಗ ಪಡೆದಿದ್ದಾರೆ. ಇಂದೂ ಕೂಡ ಒಂದು ಉತ್ತಮ ಕೆಲಸವಾಗುತ್ತಿದ್ದು, ಹಲವು ಕಂಪನಿಗಳು ಇಲ್ಲಿಗೆ ಬಂದಿವೆ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.ಪಿಇಎಸ್ ಸಂಸ್ಥೆಯ ರಿಜಿಸ್ಟ್ರರ್ ಡಾ.ನಾಗರಾಜ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳು ಮಾತ್ರ ಭವಿಷ್ಯವನ್ನು ನಿರ್ಧಾರ ಮಾಡುವುದಿಲ್ಲ. ಅದಕ್ಕಾಗಿ ಕೌಶಲ್ಯತೆ ಬೇಕಾಗುತ್ತದೆ. ಎಷ್ಟೇ ಅಂಕಗಳನ್ನು ಪಡೆದರೂ ಕೂಡ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ನಮ್ಮ ಮಕ್ಕಳು ತಮ್ಮ ಕ್ರೀಯಾಶೀಲತೆಯನ್ನು, ಕೌಶಲ್ಯತೆಯನ್ನು ವರ್ತಮಾನದ ವಿಷಯಗಳನ್ನು ತಿಳಿದುಕೊಳ್ಳುವುದು ಅನಿವಾರ್‍ಯವಾಗಿದೆ ಎಂದರು.

ವಿದ್ಯಾರ್ಥಿಗಳು ಕೇವಲ ಬೌದ್ಧಿಕವಾಗಿ ಬೆಳೆದರೆ ಮಾತ್ರ ಸಾಲದು, ಅವರು ಮಾನಸಿಕವಾಗಿಯೂ ಗಟ್ಟಿಗೊಳ್ಳಬೇಕು. ಓದಿನ ಜೊತೆಗೆ ಆಧ್ಯಾತ್ಮ, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ, ಶಿಸ್ತು, ಸಮಯ ಪ್ರಜ್ಞೆ, ದೃಢ ನಂಬಿಕೆ, ಶ್ರದ್ಧಾ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.ವಿಜ್ಡಮ್ ಎಡ್‌ನ ಎಂಡಿ ಫ್ರಾನ್ಸಿಸ್ ಕಾ ತೇಜ್ ಮಾತನಾಡಿ, ವಿಜ್ಡಮ್ ಎಡ್ ಎಂಬುದು ಶೈಕ್ಷಣಿಕ ಮತ್ತು ಕಾರ್ಪೋರೇಟ್ ವೃತ್ತಿಪರರ ಸಮೂಹವು ಆರಂಭಿಸಿದ ಸಂಸ್ಥೆಯಾಗಿದೆ. ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಇದು ಸದಾ ಸ್ಪಂದಿಸುತ್ತದೆ. ಇಂದು ಯುವ ಜನಾಂಗಕ್ಕೆ ಬೇಕಾದ ಕೌಶಲ್ಯಗಳ ಆಧಾರಿತ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಅದರ ಭಾಗವಾಗಿಯೇ ಇಲ್ಲಿ ಇಂದು ಈ ಕಾರ್ಯಾಗಾರ ಮತ್ತು ಉದ್ಯೋಗಮೇಳ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಿಕೊಳ್ಳಲು ಮತ್ತು ಉದ್ಯೋಗದ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಲು ಇದು ಸಹಾಯಕವಾಗುತ್ತದೆ. ಇದರ ಕಚೇರಿ ಶಿವಮೊಗ್ಗದ ಹೊಸಮನೆಯ ಜೈಲ್‌ ಸರ್ಕಲ್‌ನಲ್ಲಿದ್ದು, ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.ಪ್ರೇರಣಾ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಉದ್ಯೋಗಮೇಳದಲ್ಲಿ ಸುಮಾರು 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಹಾಗೂ ಅಂತರ ರಾಜ್ಯ ಕಂಪನಿಗಳು ಭಾಗವಹಿಸಿದ್ದವು. ನೂರಾರು ಉದ್ಯೋಗಾಂಕಾಕ್ಷಿಗಳಿಗೆ ಮಾಹಿತಿ, ಮಾರ್ಗದರ್ಶನ, ಸಂದರ್ಶನ, ನೇಮಕಾತಿ ಪ್ರಕ್ರಿಯೆಗಳೂ ನಡೆದವು.

ಕಾರ್ಯಕ್ರಮದಲ್ಲಿ ಪಿಇಎಸ್ ಸಂಸ್ಥೆಯ ಪ್ರಾಂಶುಪಾಲ ಡಾ.ಸ್ವಾಮಿ, ಡಾ.ಜಿ.ಎನ್. ಸುದರ್ಶನ್, ವಿಜ್ಡಮ್ ಸಂಸ್ಥೆಯ ಎಂಡಿ ಸಿಇಓ ಗುರುತೇಜ್, ವಿಜ್ಡಮ್ ಸಂಸ್ಥೆಯ ಶಿವಮೊಗ್ಗದ ಕೋ-ಆರ್ಡಿನೇಟರ್ ಅನಂತನಾಯ್ಕ, ಭೂಮಿಕಾ ಇದ್ದರು. ಪೂಜಾಗೌಡ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತಿ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ
ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಕನ್ನಡದಲ್ಲಿಯೇ ವ್ಯವಹರಿಸಿ