-ಮಹಾಂತ ಶಿವಯೋಗಿಗಳ ಜನ್ಮದಿನ -ಜಿಲ್ಲಾಡಳಿತದ ನೇತೃತ್ವದಲ್ಲಿ ಡಾ.ಮಹಾಂತ ಶಿವಯೋಗಿ ಜನ್ಮದಿನದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಇಂದಿನ ಯುವ ಸಮೂಹ ವ್ಯಸನಗಳಿಗೆ ದಾಸರಾಗಿ ಅಮೂಲ್ಯ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದು, ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಹೇಳಿದರು.ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಾದ್ಯಂತ ಮಹಾಂತ ಜೋಳಿಗೆ ಅಭಿಯಾನದ ಮೂಲಕ ಸಂಚರಿಸಿ, ಜನರಲ್ಲಿನ ವ್ಯಸನ ವಸ್ತುಗಳನ್ನು ತಮ್ಮ ಜೋಳಿಗೆಯಲ್ಲಿ ಭಿಕ್ಷೆ ರೂಪದಲ್ಲಿ ಹಾಕಿಸಿಕೊಂಡು ಜಾಗೃತಿ ಮೂಡಿಸಿ, ವ್ಯಸನ ನಿರ್ಮೂಲನೆಗೆ ಅಪಾರವಾಗಿ ಶ್ರಮಿಸಿದ್ದರು. ವಿದ್ಯಾರ್ಥಿಗಳು ಪುಸ್ತಕ ಓದು-ಬರಹದ ಹವ್ಯಾಸ, ಒಳ್ಳೆಯ ವ್ಯಕ್ತಿಯ ಗೆಳತನ, ಉನ್ನತ ಗುರಿ ಸಾಧಿಸುವ, ಉತ್ತಮ ಪ್ರಜ್ಞೆಗಳಾದಾಗ ಮಾತ್ರ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ. ಶಿವಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಸನ ವೆಂದರೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಮದ್ಯಪಾನ, ಧೂಮಪಾನ, ತಂಬಾಕು ಉತ್ಪನ್ನಗಳು, ಡ್ರಗ್ಸ್ ಸೇವಿಸುವ ದುಶ್ಚಟಗಳನ್ನು ಸಮಾಜದಿಂದ ಮುಕ್ತ ಮಾಡಬೇಕು. ಡಾ.ಮಹಾಂತ ಶಿವಯೋಗಿಗಳು ರಾಷ್ಟ್ರಾದ್ಯಂತ ಮಹಾಂತ ಜೋಳಿಗೆ ಅಭಿಯಾನ ನಡೆಸಿ ಸಾಕಷ್ಟು ವ್ಯಸನ ವ್ಯಕ್ತಿಗಳ ಮನ ಪರಿವರ್ತಿಸಿ ವ್ಯಸನ ವಸ್ತುಗಳನ್ನು ಜೋಳಿಗೆಯಲ್ಲಿ ಸಂಗ್ರಹಿಸುತ್ತಿದ್ದರು ಎಂದರು.
ಸಾಮಾಜಿಕ ಕಳಕಳಿಯನ್ನು ಮನಗಂಡು ಸರ್ಕಾರದ ವತಿಯಿಂದ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ನಿಮ್ಮ ನೆರೆಹೊರೆಯವರಿಗೆ ದುಶ್ಚಟಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು ಎಂದರು.ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ ಮಾತನಾಡಿ, ಪ್ರಸ್ತುತ ಗ್ರಾಮೀಣ, ನಗರ ಪ್ರದೇಶಗಳಲ್ಲಿ ವ್ಯಸನ ದೊಡ್ಡವರಿಗೆ ಅಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವ ಸಮೂಹಕ್ಕೆ ಅಂಟಿಕೊಳ್ಳುತ್ತಿದೆ. ದುಶ್ಚಟಗಳಿಂದ ದೂರ ಇರಲು ಒಳ್ಳೆಯವರ ಸಹವಾಸ ಮಾಡುವ ಜತೆಗೆ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಮೈಗೂಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಅವರು ವ್ಯಸನ ಮುಕ್ತ ಸಮಾಜ ನಿರ್ಮಾಣದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಶಫಿ ಸಾದುದ್ದೀನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಸಾರ್ವಜನಿಕರಿಗೆ ಜಾಗೃತಿ: ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ದೊಡ್ಡಬಳ್ಳಾಪುರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಸನ ಮುಕ್ತ ಜಾಗೃತಿ ಶಿಬಿರ ಏರ್ಪಡಿಸಿ ಸಾರ್ವಜನಿಕರಿಗೆ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಬಹುಮಾನ ವಿತರಣೆ: ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.